Search

PSI Re-examination : ಪಿಎಸ್ ಐ ಮರು ಪರೀಕ್ಷೆಗೆ ಹೆಚ್ಚಿದ ಒತ್ತಡ : ಸ್ಪರ್ಧಾರ್ಥಿಗಳಿಂದ ಹೋರಾಟ

ರಾಜ್ಯಾದ್ಯಂತ ಸಂಚಲನವನ್ನು ಸೃಷ್ಟಿ ಮಾಡಿದ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ನೇಮಕಾತಿ ಹಗರಣವು ದಿನದಿಂದ ದಿನಕ್ಕೆ ಒಂದೊಂದು ತಿರುವು ಪಡೆಯುತ್ತಿರುವುದನ್ನು ಕಾಣುತ್ತಿದ್ದೇವೆ‌. ಸರ್ಕಾರವು ಮರು ಪರೀಕ್ಷೆ ನಡೆಸಲಾಗುತ್ತದೆ ಎಂದು ಘೋಷಣೆ ಮಾಡಿ ಅನೇಕ ದಿನಗಳು ಕಳೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ತ್ವರಿತವಾಗಿ ಮರು ಪರೀಕ್ಷೆ ಮಾಡಬೇಕು ಎಂದು ಅಭ್ಯರ್ಥಿಗಳು ಬೀದಿಗಿಳಿದಿದ್ದಾರೆ.

ಅಕ್ರಮಗಳಲ್ಲಿ ಬಂಧಿಯಾಗುವವರ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ. ಇತ್ತೀಚಿಗೆ ನೇಮಕಾತಿ ಹಗರಣದ 36ನೇ ಆರೋಪಿ ಸಿದ್ದರಾಜು ಎಂಬುವವರನ್ನು ಬಂಧಿಸಲಾಗಿತ್ತು. ಇದರ ಹಿಂದೆಯೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಇನ್ನೂ ಇದೇ ಶುಕ್ರವಾರ ಹಗರಣದಲ್ಲಿ ಬಂಧಿತರಾಗಿರುವ ಇಬ್ಬರ ಆರೋಪಿಗಳಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ. ಪರೀಕ್ಷೆಯಲ್ಲಿ ನಾಲ್ಕನೇ ರಾಂಕ್ ಪಡೆದಿದ್ದ ಮೊದಲ ಆರೋಪಿಯಾಗಿರುವ ಎಸ್ ಜಾಗೃತ್ ಮತ್ತು ಮೊದಲ ರಾಂಕ್ ಪಡೆದಿದ್ದ 17 ನೇ ಆರೋಪಿಯಾಗಿರುವ ರಚನಾ ಹಣಮಂತ ಎಂಬುವವರಿಗೆ ಜಾಮೀನು ದೊರೆತಿದೆ.

ಸೆಪ್ಟೆಂಬರ್ 14 ರಂದು ಜಾಗೃತ್ ಮತ್ತು ಅಕ್ಟೋಬರ್ 27ರಂದು ರಚನಾ ಅವರ ಪರವಾಗಿ ವಕೀಲರಾದ ಡಾ. ವಂದನಾ ಜಾಮೀನು ಕೋರಿ ರ್ಜಿ ಸಲ್ಲಿಸಿದ್ದರು.ಹೀಗಾಗಿ ನೊಂದ ಅಭ್ಯರ್ಥಿಗಳು ಗುರುವಾರ ಆಗದಿದ್ದರೆ 545 ಮರು ಪರೀಕ್ಷೆ, ಸರ್ಕಾರಕ್ಕೆ ಮುಂದಿದೆ ಅಗ್ನಿ ಪರೀಕ್ಷೆ ಹೆಸರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಮೂಲಕ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದ ಬಗ್ಗೆ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಪ್ರಕ್ರಿಯೆ ಮುಗಿದ ನಂತರ ಮರು ಪರೀಕ್ಷೆ ನಡೆಸುವ ಬಗ್ಗೆ ಪ್ರಕಟಣೆ ಹೊರಡಿಸಲಾಗುವುದು, ರದ್ದಾದ ಪರೀಕ್ಷೆ ಬರೆದಿದ್ದ ಹಾಗೂ ಅಕ್ರಮದಲ್ಲಿ ಭಾಗಿಯಾಗದಿದ್ದ ಎಲ್ಲಾ 56000 ಅಭ್ಯರ್ಥಿಗಳು ಮರು ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆ ಹೊಂದಿದ್ದು, ಯಾವುದೇ ಆತಂಕ ಬೇಡ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ ನೀಡಿದ್ದರು. ಅಲ್ಲದೇ, ಮರು ಪರೀಕ್ಷೆ ನಡೆಸುವುದು ತಡವಾದರೆ, ವಯೋಮಿತಿ ಅರ್ಹತೆ ಕಳೆದುಕೊಳ್ಳುವ ಭಯ ಬೇಡ, ಪರೀಕ್ಷೆ ತಯಾರಿ ಮುಂದುವರೆಸಿ ಎಂದು ಸಚಿವರು ಭರವಸೆ ನೀಡಿದ್ದರು.

ಇಷ್ಟು ಪ್ರಮಾಣದಲ್ಲಿ ಭರವಸೆ ನೀಡಿದ ಸರ್ಕಾರ ಹಾಗೂ ಸಚಿವರು ಇದೀಗ ಇದರ ಬಗ್ಗೆ ಚಕಾರ ಎತ್ತದೇ ಇರುವುದು ಸರಿಯಲ್ಲ ಎಂದು ಸ್ಪರ್ಧಾರ್ಥಿಗಳು ಆರೋಪಿಸಿದ್ದಾರೆ. 545 ಪಿ ಎಸ್ ಐ ನೇಮಕಾತಿ ಮರು ಪರೀಕ್ಷೆಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಬೇಕು. 545 ರಲ್ಲಿ ಇರುವ ಆರೋಪಿಗಳು 402 ನಲ್ಲಿಯೂ ಇರುವ ಸಾಧ್ಯತೆ ಇದೆ. ಹೀಗಾಗಿ ತನಿಖೆ ನಡೆಸಿ 545 ಮತ್ತು402 ಪಿ ಎಸ್ ಐ ಪರೀಕ್ಷೆಯನ್ನು ಶೀಘ್ರದಲ್ಲಿಯೇ ಮಾಡಬೇಕು. ಹಾಗೂ ಕೆಪಿಎಸ್ಸಿ ವತಿಯಿಂದ ಹೊಸದಾಗಿ 1000 ಕ್ಕೂ ಅಧಿಕ ಎಫ್ ಡಿ ಐ, ಎಸ್ ಡಿ ಐ, ಗ್ರೂಪ್ ಸಿ ಮತ್ತು 500 ಕ್ಕೂ ಅಧಿಕ ಕೆ ಎ ಎಸ್ ಹುದ್ದೆಗಳಿಗೆ ಅತಿ ಶೀಘ್ರದಲ್ಲಿಯೇ ಹೊಸ ಅಧಿಸೂಚನೆಯನ್ನು ಹೊರಡಿಸಲು ಆಗ್ರಹಿಸಿ ಪ್ರೀಡಂ ಪಾರ್ಕ್ ನಲ್ಲಿ ಬೀದಿಗಿಳಿದಿದ್ದಾರೆ.

More News

You cannot copy content of this page