ವಿಶೇಷ ವರದಿ : ಲಕ್ಷ್ಮೀಕಾಂತ
ಬೆಂಗಳೂರು : ಅಲ್ಪಸಂಖ್ಯಾತರಿಗೆ ಪ್ರತ್ಯೇಕ 10 ಕಾಲೇಜು ಸ್ಥಾಪನೆಗೆ ಸರ್ಕಾರ ಮುಂದಾಗಿದೆ ಎಂಬ ಮಾಹಿತಿ ಹಿಂದೂಪರ ಸಂಘಟನೆಗಳನ್ನ ಕೆರಳಿಸಿತ್ತು. ಸರ್ಕಾರ ಅಂತಹ ಪ್ರಸ್ತಾವನೆಯೇ ನಮ್ಮ ಮುಂದಿಲ್ಲವೆಂದು ಆರೋಪ ತಳ್ಳಿ ಹಾಕುವ ಮೂಲಕ ತಪ್ಪಿಸಿಕೊಳ್ಳುವ ಯತ್ನ ನಡೆಸಿತು. ಆದರೀಗ ಸರ್ಕಾರದ ನಿಜಬಣ್ಣ ಬಯಲಾಗಿದ್ದು, ಬಿಜೆಪಿ ಸರ್ಕಾರವೇ ಹಿಂದೂ ಸಂಘಟನೆಗಳ ಕಣ್ಣಿಗೆ ಮಣ್ಣೆರಚಿರುವುದು ಆದೇಶದಿಂದಲೇ ಬಹಿರಂಗಗೊಂಡಿದೆ.
ವಿಚಿತ್ರ ಹಾಗೂ ಸತ್ಯವೆಂದರೆ ರಾಜ್ಯ ಸರ್ಕಾರ ಪ್ರತ್ಯೇಕ 10 ಅಲ್ಪಸಂಖ್ಯಾತ ಕಾಲೇಜುಗಳನ್ನು ಆರಂಭಿಸಲು ಅಕ್ಟೋಬರ್ 28ರಂದೆ ಅನುಮೋದನೆ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಆದರೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಮುಜರಾಯಿ ಹಾಗು ಹಜ್ ಖಾತೆ ಸಚಿವೆ ಶೆಶಿಕಲಾ ಜೊಲ್ಲೆ ಮಾಧ್ಯಮಗಳಿಗೆ ಹೇಳಿಕೆ ನೀಡಿ, ಮುಸಲ್ಮಾನರಿಗೆ ಪ್ರತ್ಯೇಕ ಕಾಲೇಜು ಸ್ಥಾಪನೆ ಪ್ರಸ್ತಾವನೆ ಇಲ್ಲವೆಂದು ಸ್ಪಷ್ಟನೆ ನೀಡಿ, ಹಿಂದೂಪರ ಸಂಘಟನೆಗಳ ಕಣ್ಣಿಗೆ ಮಣ್ಣೆರೆಚಿದ್ದಾರೆ.

2 ತಿಂಗಳ ಹಿಂದೆಯೇ ಕಾಲೇಜು ಆರಂಭಿಸಲು ಅನುಮತಿ ನೀಡಿದ್ದ ಸರ್ಕಾರ :
ಅಲ್ಪಸಂಖ್ಯಾತರ ವಸತಿ ಶಾಲೆಗಳು ಮಾತ್ರ ಕಾರ್ಯನಿರ್ವಹಿಸುತ್ತಿರುವ 10 ಜಿಲ್ಲೆಗಳು ಪದವಿ ಪೂರ್ವ ವಸತಿ ಕಾಲೇಜುಗಳನ್ನು ಪ್ರಾರಂಭಿಸಲು ಸರ್ಕಾರವು ಮಂಜೂರಾತಿ ನೀಡಿದೆ. ಸದರಿ ಕಾಲೇಜುಗಳಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ (11 & 12ನೇ ತರಗತಿ)ಗಳನ್ನು ಆಂಗ್ಲ ಮಾಧ್ಯಮದ ಸಹಶಿಕ್ಷಣ ಮಾದರಿಯಲ್ಲಿ ಒಟ್ಟು 120 ಸಂಖ್ಯಾಬಲದೊಂದಿಗೆ (ಪಿಸಿಎಂಬಿ) ಕೋರ್ಸ್‌ಗಳನ್ನು ಪ್ರಾರಂಭಿಸಲು ಮಂಜೂರಾತಿ ನೀಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಸದರಿ ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಸಿ ಈ ಕೆಳಗಿನಂತೆ ಅದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ : MWD 149 MDS 2022 ಬೆಂಗಳೂರು, ದಿನಾಂಕ : 28.10.2022

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಈ ಕೆಳಕಂಡ 10 ಜಿಲ್ಲೆಗಳಲ್ಲಿ ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಗಳಲ್ಲಿ ಪದವಿ ಪೂರ್ವ ತರಗತಿಗಳನ್ನು ಈ ಕೆಳಕಂಡ ವಿದ್ಯಾರ್ಥಿ ಗಳ ಸಂಖ್ಯಾಬಲ ಹಾಗೂ ಕೋರ್ಸ್‌ನೊಂದಿಗೆ ಪ್ರಾರಂಭಿಸಲು ಮಂಜೂರಾತಿ ನೀಡಿ ಆದೇಶಿಸಿದೆ.
ಇದಕ್ಕೆ ತಗಲುವ ವೆಚ್ಚವನ್ನು 2022-23ನೇ ಸಾಲಿನ ಆಯವ್ಯಯದಲ್ಲಿ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ನಿರ್ವಹಣೆಗಾಗಿ ಲೆಕ್ಕಶೀರ್ಷಿಕ ಅಡಿಯಲ್ಲಿ ನೂತನ ಹಾಸ್ಟೆಲ್‌ಗಳ ಪ್ರಾರಂಭ, ರಾಜ್ಯವಲಯ ಯೋಜನೆಯಲ್ಲಿ ಒದಗಿಸಲಾಗುವ ಅನುದಾನದಿಂದ ಧರಿಸತಕ್ಕದ್ದು. ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಗೆ ತಗಲುವ ಬಂಡ ವಾಳದ ವೆಚ್ಚವನ್ನು (ಲೆಕ್ಕಶೀರ್ಷಿಕೆ) ಅಲ್ಪಸಂಖ್ಯಾತರ ವಸತಿ ನಿಲಯ ಮತ್ತು ವಸತಿ ಶಾಲೆ ಕಟ್ಟಡ ನಿರ್ಮಾಣ. ಪ್ರಧಾನಮಂತ್ರಿ ಜನ ವಿಕಾಸ ಯೋಜನೆಗಾಗಿ 2022-23ನೇ ಸಾಲಿನಲ್ಲಿ ಒದಗಿಸಲಾದ ಅನುದಾನದಲ್ಲಿ ಭರಿಸತಕ್ಕದ್ದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಆದೇಶದಂತೆ ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು,ಕಟ್ಟಡ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆದಿದೆ ಎನ್ನಲಾಗಿದೆ. ಹೀಗಾಗಿ ಸರ್ಕಾರ ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳಲು ಮುಖ್ಯಮಂತ್ರಿ, ಸಚಿವರು ಮಾದ್ಯಮಗಳ ಮುಂದೆ ಹಸಿಹಸಿ ಸುಳ್ಳುಗಳನ್ನು ಪೋಣಿಸುತ್ತಿದ್ದಾರೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ 2022ನೇ ಸಾಲಿನಲ್ಲಿ ಮಂಡಿಸಿದ ಬಜೆಟ್ ನಲ್ಲಿ ಅಲ್ಪಸಂಖ್ಯಾತ ಇಲಾಖೆ ಅಡಿಯಲ್ಲಿಮುಸ್ಲಿಂ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಕಾಲೇಜು ಆರಂಭಿಸುವುದಾಗಿ ಘೋಷಿಸಿ, ಅನುದಾನ ಮೀಸಲಿಟ್ಟಿದ್ದರು.ಅದರಂತೆ ಅಲ್ಪಸಂಖ್ಯಾತ ಇಲಾಖೆ ನಿರ್ದೇಶಕರ ಪ್ರಸ್ತಾವನೆ ಡಿಒಎಂ/ಡಿಇವಿಪಿ/ಬಜೆಟ್/1/2022 ರಂತೆ ಯೋಜನೆಗೆ ಅನುಮೋದನೆ ನೀಡಲಾಗಿದೆ.
ಏಪ್ರಿಲ್ 11ರಂದು ಅಲ್ಪಸಂಖ್ಯಾತ ಇಲಾಖೆಯ ಆದೇಶದಂತೆ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ 16 ವಸತಿ ಶಾಲೆಗಳನ್ನು ಪದವಿ ಪೂರ್ವ ಕಾಲೇಜು ಗಳೊಂದಿಗೆ ಒಂದುಗೂಡಿಸಿ ಎಪಿಜೆ ಅಬ್ದುಲ್ ಕಲಾಂ ಶಾಲೆಗಳೆಂದು ಮರು ನಾಮಕರಣ ಮಾಡಿ ಕಾಲೇಜು ಪ್ರಾರಂಭಿಸಲು ಅನುಮತಿ ನೀಡಿದೆ.

ಎಲ್ಲೆಲ್ಲಿ ಪದವಿ ಪೂರ್ವ ಕಾಲೇಜು ಆರಂಭಿಸಲು ಅನುಮತಿ ಇದೆ :
ಅದರಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಗಿಡ್ಡಪನಹಳ್ಳಿ-1, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ-1, ಚಿಕ್ಕಮಗಳೂರಿನ ತೇಗೂರಿನಲ್ಲಿ-1, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಂಡಜ್ಜಿ ಯಲ್ಲಿ-1, ಧಾರವಾಡ ಜಿಲ್ಲೆಯ ಅಂಚಟಗೇರೆಯಲ್ಲಿ-1, ಗದಗ ಜಿಲ್ಲೆಯ ಮಲ್ಲಸಮುದ್ರದಲ್ಲಿ-1, ಕೊಡಗಿನ ಕೂಡ್ಲಿಪೇಟೆಯಲ್ಲಿ-1, ಕೋಲಾರದಲ್ಲಿ -1, ಉತ್ತರ ಕನ್ನಡದ ದಾಂಡೇಲಿಯಲ್ಲಿ-1, ವಿಜಯನಗರದ ಹೊಸಪೇಟೆ ಯಲ್ಲಿ-1 ಕಾಲೇಜು ಆರಂಭಿಸಲು ಅನುಮತಿ ನೀಡಿದೆ. ಅಲ್ಲದೆ ಈ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಪಿಸಿಎಂಬಿ ಕೋರ್ಸ್ (ಕಾಂಬಿನೇಶನ್ ) ಬೋಧಿಸಲು ಹಾಗೂ ಪ್ರಥಮ ಪಿಯುಸಿ -60 ಸೀಟುಗಳು, ದ್ವಿತೀಯ ಪಿಯುಸಿಯಲ್ಲಿ 60 ವಿದ್ಯಾರ್ಥಿಗಳು ಸೇರಿ ಒಟ್ಟು 120 ವಿದ್ಯಾರ್ಥಿಗಳ ಸಂಖ್ಯಾಬಲ ಭರ್ತಿಗೂ ಅವಕಾಶ ಕಲ್ಪಿಸಿದೆ.

ಒಟ್ಟಾರೆ ಅಲ್ಪಸಂಖ್ಯಾತರ ಓಲೈಕೆಗಾಗಿ ಸರ್ಕಾರ ಬಜೆಟ್ ನಲ್ಲಿ ಯೋಜನೆಗಳನ್ನು ಘೋಷಿಸಿದೆ, ಆದರೆ ಜಾರಿಗೆ ತರಲು, ಧರ್ಮ, ಜಾತಿ, ಪಂಗಡ, ಮತಭೇದ ಎಣಿಸುವ ಮೂಲಕ ಸೌಲಭ್ಯ ನೀಡಲು ಹಿಂದೇಟು ಹಾಕುತ್ತಿದೆ. ಜನಪರ, ದೀನ ದಲಿತರ ಪರ ಎಂದು ಘೋಷಣೆಗಳನ್ನು ಹಾಕಿಕೊಂಡಿರುವ ಸರ್ಕಾರ ತನ್ನ ನಿಲವು, ಧೃಡ ವಿಶ್ವಾಸವನ್ನು ಇಂತಹ ಸಂದರ್ಭದಲ್ಲಿ ಪ್ರದರ್ಶಿಸಬೇಕಿದೆ.