ಬೀಜಿಂಗ್ : ಭಾರತದೊಂದಿಗಿನ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಪದೇ ಪದೇ ಕ್ಯಾತೆ ತೆಗೆಯುವ ಚೀನಾದ ಯೋಧರು, ಗಡಿ ನುಸುಳುವಿಕೆ ಮೂಲಕ ಭಾರತೀಯ ಸೈನಿಕರೊಂದಿಗೆ ಕಾದಾಟ ನಡೆಸುತ್ತಲೇ ಇರುತ್ತಾರೆ. ಚೀನಿ ಸೈನಿಕರು ಪ್ರತಿ ಬಾರಿಯೂ ಗಡಿ ನುಸುಳಿ ಒಳಬಂದಾಗಲೂ, ನಮ್ಮ ದಿಟ್ಟ ಭಾರತೀಯ ಸೇನೆಯ ಯೋಧರು, ಸೂಕ್ತ ಉತ್ತರವನ್ನೇ ನೀಡಿದ್ದಾರೆ. ಆದರೆ ಭಾರತೀಯ ಸೈನಿಕರನ್ನು ಎದುರಿಸಲು ತನ್ನ ಪ್ರಸ್ತುತ ಸೈನಿಕರ ದೈಹಿಕ ಸಾಮರ್ಥ್ಯ ಸಾಲದು ಎಂದು ಅರಿತಿರುವ ಚೀನಾ, ಇದೇ ಕಾರಣಕ್ಕೆ ವಿಶೇಷ ದೈಹಿಕ ಸಾಮರ್ಥ್ಯವುಳ್ಳ ಸೈನಿಕರ ಪಡೆ ಕಟ್ಟಲು ಮುಂದಾಗಿದೆ ಎಂಬ ವರದಿ ಬಂದಿದೆ.

ಹೌದು, ಗಡಿಯಲ್ಲಿ ‘ಸೂಪರ್ ಸೋಲ್ಜರ್ಸ್’ ಪಡೆ ಕಟ್ಟಲು ಚೀನಾ ಮುಂದಾಗಿದೆ ಎಂದು, ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಬಿಡುಗಡೆ ಮಾಡಿರುವ ವರದಿಯೊಂದರಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ ಈ ಕುರಿತು ನಾವು ಭಾರತವನ್ನು ಎಚ್ಚರಿಸಿದ್ದೇವೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.
ಮಾನವ ಸಹಜ ಸೈನಿಕರ ವಂಶವಾಹಿಗಳನ್ನು (ಜೀನ್) ರೂಪಾಂತರಗೊಳಿಸಿ, ವಿಶೇಷ ದೈಹಿಕ ಸಮಾರ್ಥ್ಯವುಳ್ಳ ಸೈನಿಕರನ್ನು ನಿರ್ಮಿಸಲು ಚೀನಾ ಮುಂದಾಗಿದೆ ಎನ್ನಲಾಗಿದೆ. ಅಲ್ಲದೇ ಈ ‘ಸೂಪರ್ ಸೋಲ್ಜರ್ಸ್’ ಯೋಧರನ್ನು ಭಾರತದೊಂದಿಗಿನ ಎಲ್‌ಎಸಿ ಬಳಿ ನಿಯೋಜಿಸಲು ಚೀನಾ ಯೋಜನೆ ರೂಪಿಸಿದೆ ಎಂದು ಸಿಐಎ ವರದಿ ಎಚ್ಚರಿಸಿದೆ.

2020ರಿಂದಲೇ ಚೀನಾವು ಕ್ರಿಸ್ಪರ್ ತಂತ್ರಜ್ಞಾನದ ಸಹಾಯದಿಂದ ಸೂಪರ್ ಸೈನಿಕರನ್ನು ತಯಾರಿಸುವ ಯೋಜನೆ ಪ್ರಾರಂಭಿಸಿದೆ. ಇದಕ್ಕಾಗಿ ಆಯ್ದ ಆರೋಗ್ಯವಂತ ಯೋಧರ ಡಿಎನ್‌ಎಗಳನ್ನೂ ಅಪಾರ ಪ್ರಮಾಣದಲ್ಲಿ ಸಂಗ್ರಹಿಸಿದೆ. ಇದರಿಂದ ಹೊಸ ಬಲಾಢ್ಯ ಸೈನಿಕರ ಪಡೆಯನ್ನು ನಿರ್ಮಾಣ ಮಾಡುವ ಯೋಜನೆಗೆ ಚೀನಾ ಚಾಲನೆ ನೀಡಿದೆ ಎಂದು ಸಿಐಎ ವರದಿಯಲ್ಲಿ ಉಲ್ಲೇಖಿಸಲಾಗಿದೆ.
2018ರಲ್ಲಿ ಚೀನಾದ ವಿಜ್ಞಾನಿ ಹೆ ಜಿಯಾನ್ಕುಯಿ ಜಗತ್ತಿನ ಮೊದಲ ವಂಶವಾಹಿ ರೂಪಾಂತರಿಸಿದ ಮಗುವನ್ನು ರೂಪಿಸಿದ್ದರು. ಚೀನಾ ಈ ತಂತ್ರಜ್ಞಾನ ಆಧರಿಸಿ ಸೂಪರ್ ಸೈನಿಕರ ತಯಾರಿಕೆಗಾಗಿ ಡಿಎನ್‌ಎ ಸಂಗ್ರಹಿಸಿದೆ ಎಂಬ ಸಿಐಎ ಮಾಜಿ ನಿರ್ದೇಶಕ ಜಾನ್ ರಾಯಟ್ ಕ್ಲಿಫ್ ಹೇಳಿಕೆಯನ್ನು ಉಲ್ಲೇಖಿಸಿ ‘ವಾಲ್‌ಸ್ಟ್ರೀಟ್ ಜರ್ನಲ್’ ವರದಿ ಪ್ರಕಟಿಸಿದೆ. ಸಿಐಎ ವರದಿಯನ್ನು ಫ್ರಾನ್ಸ್ ಮತ್ತು ಇಂಗ್ಲೆಂಡ್ ಕೂಡ ಅನುಮೋದಿಸಿದ್ದು, ಚೀನಾದ ಈ ಹೊಸ ಯುದ್ಧ ನೀತಿ ಇಡೀ ಜಗತ್ತಿಗೆ ಮಾರಕವಾಗಿ ಪರಿಣಮಿಸಬಹುದು ಎಂದು ಎಚ್ಚರಿಸಿದೆ.
ಯಾರು ಈ ‘ಸೂಪರ್ ಸೋಲ್ಜರ್ಸ್’ ?

ಸಿಐಎ ವರದಿ ಪ್ರಕಾರ, ಚೀನಾ ನಿರ್ಮಿಸಲು ಹೊರಟಿರುವ ಸೂಪರ್ ಸೋಲ್ಜರ್ಸ್’ ಅತಿಮಾನುಷ ಶಕ್ತಿಯನ್ನು ಹೊಂದಿರಲಿದ್ದಾರೆ. ಗಡಿಯಲ್ಲಿ ಊಟ, ನಿದ್ದೆ ಇಲ್ಲದೇ ತಿಂಗಳುಗಳ ಕಾಲ ಇವರು ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಈ ವಂಶವಾಹಿ ಪರಿವರ್ತಿತ ಈ ಸೈನಿಕರಿಗೆ ಹಸಿವಾಗುವುದಿಲ್ಲ ಹಾಗೂ ನಿದ್ದೆ ಬರುವುದಿಲ್ಲ ಎಂದು ಹೇಳಲಾಗುತ್ತಿದೆ.

ಶತ್ರು ಸೈನಿಕರೊಂದಿಗಿನ ಕಾದಾಟದ ಸಂದರ್ಭದಲ್ಲಿ ಹೆಚ್ಚಿನ ದೈಹಿಕ ಸಾಮರ್ಥ್ಯ ಪ್ರದರ್ಶಿಸಲಿರುವ ಈ ಯೋಧರು, ಸುಲಭವಾಗಿ ಶತ್ರು ಸೈನಿಕರನ್ನು ಮಣಿಸಬಲ್ಲರು. ಹಾಗೆಯೇ ಇವರು ಮಾಮೂಲಿ ಸೈನಿಕರಿಗಿಂತ ಹೆಚ್ಚಿನ ಉಗ್ರತೆಯನ್ನು ಪ್ರದರ್ಶಿಸುವ ಸಾಧ್ಯತೆ ಇದೆ ಎಂದು ಸಿಐಎ ವರದಿಯಲ್ಲಿ ಮಾಹಿತಿ ನೀಡಲಾಗಿದೆ.

ಡಿಎನ್‌ಎ ರೂಪಾಂತರಿಸಿಕೊಂಡ ಸೈನಿಕರು ಕಾಯಿಲೆಗೆ ತುತ್ತಾಗುವುದಿಲ್ಲ. ಹೀಗಾಗಿ ಲಡಾಖ್, ಅರುಣಾಚಲ ಪ್ರದೇಶ ಮತ್ತು ದಕ್ಷಿಣ ಚೀನಾ ಸಮುದ್ರದ ದುರ್ಗಮ ನೆಲ-ಜಲ ಗಡಿ ಪ್ರದೇಶಗಳಲ್ಲೂ ಈ ‘ಸೂಪರ್ ಸೋಲ್ಜರ್ಸ್’ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲವರಾಗಿರುತ್ತಾರೆ ಎಂದು ಸಿಐಎ ವರದಿ ಎಚ್ಚರಿಸಿದೆ.

ಹಾಲಿವುಡ್ ಚಿತ್ರಗಳಲ್ಲಿ ಕಂಡುಬರುವ ಇಂತಹ ಕಲ್ಪನೆಗಳನ್ನು ಚೀನಾ ನಿಜ ಮಾಡಲು ಹೊರಟಿದ್ದು, ಒಂದು ವೇಳೆ ಸಿಐಎ ಮಾಹಿತಿ ನಿಜವೇ ಆಗಿದ್ದರೆ ಅದು ಕೇವಲ ಭಾರತಕ್ಕೆ ಮಾತ್ರವಲ್ಲದೇ, ಇಡೀ ಜಗತ್ತಿಗೇ ಗಂಡಾಂತರಕಾರಿಯಾಗಿ ಪರಿಣಮಿಸುವುದರಲ್ಲಿ ಆಶ್ಚರ್ಯವಿಲ್ಲ.