ಬೆಳಗಾವಿ; ಡಿ.21: ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಗೌಪ್ಯಸಭೆ ನಡೆಸಿದ ರಮೇಶ್ ಜಾರಕಿಹೊಳಿ ಹಾಗೂ ಈಶ್ವರಪ್ಪ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ನಾಳೆಯಿಂದ ಅಧಿವೇಶನಕ್ಕೆ ಹಾಜರಾಗುತ್ತೇವೆ ಎಂದರು. ವಿಟಿಯು ಕ್ಯಾಂಪಸ್‌ನಲ್ಲಿ ಸಿಎಂ ಬೊಮ್ಮಾಯಿ ಮೀಟಿಂಗ್ ನಡೆಸಿ, ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಎಂ ಬೊಮ್ಮಾಯಿ ನಡೆಸಿದ ಸಭೆಯಲ್ಲಿ ಮೂವರು ಮಾತ್ರ ಭಾಗಿಯಾಗಿದ್ದರು. ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ರಮೇಶ್ ಜಾರಕಿಹೊಳಿ ಮತ್ತು ಕೆ.ಎಸ್.ಈಶ್ವರಪ್ಪ ಮಾತ್ರ ಭಾಗಿಯಾಗಿದ್ದರು. ಸಿಎಂ ಬಳಿ ತಮ್ಮನ್ನು ಕ್ಯಾಬಿನೆಟ್‌ಗೆ ಏಕೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ವಿವರಣೆ ನೀಡಿದ ಶಾಸಕರು. ರಮೇಶ್ ಜಾರಕಿಹೊಳಿ ಮತ್ತು ನನಗೆ ಅನ್ಯಾಯವಾಗಿದೆ. ನನ್ನ ವಿರುದ್ಧ ಸುಖಾಸುಮ್ಮನೆ ಆರೋಪ ಎಂಬುದು ನಿಮಗೂ ಗೊತ್ತಿದೆ.
ಈಗ ನನ್ನ ವಿರುದ್ಧದ ಪ್ರಕರಣದಲ್ಲಿ ಏನಾಗಿದೆ? ಎಂಬುದು ನಿಮಗೂ ಗೊತ್ತಿದೆ. ಈಗ ಚುನಾವಣಾ ವರ್ಷ. ನನ್ನ ವಿರುದ್ಧದ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕಿದೆ. ಹೀಗಾಗಿ ನನ್ನನ್ನು ಕ್ಯಾಬಿನೆಟ್‌ಗೆ ಸೇರ್ಪಡೆ ಮಾಡಿಕೊಳ್ಳಲೇಬೇಕು ಎಂದು ರಮೇಶ್ ಜಾರಕಿಹೊಳಿ ಮತ್ತು ಈಶ್ವರಪ್ಪ ವಾದ ಮಂಡಿಸಿದರು.

ಇದಕ್ಕೆ ಸಿಎಂ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದರು. ರಮೇಶಣ್ಣ ನಿನ್ನನ್ನು ಕ್ಯಾಬಿನೆಟ್‌ಗೆ ಸೇರ್ಪಡೆ ಮಾಡಿಕೊಳ್ಳೋಣ. ನೀನು ಒಂದು ಬಾರಿಯೂ ಅಧಿವೇಶನಕ್ಕೆ ಬಂದಿಲ್ಲವೇಕೆ? ನಿನಗೆ ಅವಮಾನ ಆಗಿದೆ ಎಂದು ದೂರವುಳಿಯಬೇಡ. ಹಲವು ಜನಪ್ರತಿನಿಧಿಗಳ ವಿರುದ್ಧ ವಿವಿಧ ಬಗೆಯ ಆರೋಪಗಳು ಕೇಳಿ ಬಂದಿದೆ. ಅವರೆಲ್ಲ ಅಧಿವೇಶನದಿಂದ ದೂರವಿದ್ದಾರಾ? ನಿಮ್ಮ ತವರು ಜಿಲ್ಲೆಯಲ್ಲಿಯೇ ಅಧಿವೇಶನ ನಡೆಯುತ್ತಿದೆ.
ಇಂತಹ ಸಂದರ್ಭದಲ್ಲಿ ನೀವೇ ಬಂದಿಲ್ಲ ಅಂದರೆ ಹೇಗೆ? ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು. ಇತ್ತ ಕೆ.ಎಸ್.ಈಶ್ವರಪ್ಪರ ಸುದ್ದಿಗೋಷ್ಠಿಯ ಬಗ್ಗೆಯೂ ಮಾಹಿತಿ ಪಡೆದ ಸಿಎಂ ಬಸವರಾಜ ಬೊಮ್ಮಾಯಿ. ನೀವು ಹಿರಿಯರು, ಪಕ್ಷ ಕಟ್ಟಿದ್ದೀರಿ. ನಿಮ್ಮ ವಿರುದ್ಧದ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕಿದ್ದು ನಿಜ. ಅದಕ್ಕೆಂದು ನಾವು ಯಾರಾದ್ರೂ ನಿಮಗೆ ಸಚಿವ ಸ್ಥಾನ ಸಿಗುವುದನ್ನು ತಪ್ಪಿಸುತ್ತಿದ್ದೇವಾ? ಹೈಕಮಾಂಡ್ ನಾಯಕರ ಅನುಮತಿಯಿಲ್ಲದೇ ಇಲ್ಲಿ ಏನೂ ಆಗಲ್ಲ ಅಲ್ವಾ? ನಾನು ನನ್ನ ಪ್ರಯತ್ನ ಮಾಡುತ್ತಿದ್ದೇನೆ. ನೀವು ಹಠ ಹಿಡಿದು ಕೂತರೆ ಹೇಗೆ? ನನಗೆ ನಿಮ್ಮನ್ನು ಹೊರಗಿಟ್ಟು ಅಧಿಕಾರ ಮಾಡಬೇಕು ಎಂಬ ಇರಾದೆ ಇಲ್ಲ. ನಿಮ್ಮಂತಹ ಹಿರಿಯರು ನಮ್ಮ ಸರ್ಕಾರಕ್ಕೆ ಮಾರ್ಗದರ್ಶನ ಮಾಡುವುದು ಅವಶ್ಯಕತೆ ಇದೆ ಎಂದು ಈಶ್ವರಪ್ಪ ಅವರ ಸಿಎಂ ಬೊಮ್ಮಾಯಿ ಮನವೊಲಿಸಿದರು.