ನವದೆಹಲಿ : ಡಿ.21: ಟೀಂ ಇಂಡಿಯಾದ ಬ್ಯಾಟಿಂಗ್ ಅಸ್ತ್ರವಾಗಿರುವ ರೋಹಿತ್ ಶರ್ಮ, ಫಾರ್ಮ್ ವೈಫಲ್ಯದ ಜೊತೆಗೆ 2022ರಲ್ಲಿ ಒಂದೇ ಒಂದು ಶತಕವನ್ನು ಬಾರಿಸದೆ ಈ ವರ್ಷದ ಕ್ರಿಕೆಟ್ ಜರ್ನಿಗೆ ವಿದಾಯ ಹೇಳುತ್ತಿದ್ದಾರೆ. ಎಂಟು ವರ್ಷಗಳ ಬಳಿಕ ರೋಹಿತ್ ಶರ್ಮ, ಇಂತದ್ದೊಂದು ನೀರಸ ಪ್ರದರ್ಶನ ನೀಡಿದ್ದಾರೆ.
ಗಾಯದ ಸಮಸ್ಯೆಯಿಂದಾಗಿ ಬಾಂಗ್ಲಾದೇಶ ವಿರುದ್ದದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್ ಶರ್ಮ, 2ನೇ ಟೆಸ್ಟ್ ಪಂದ್ಯಕ್ಕೆ ತಂಡಕ್ಕೆ ಮರಳುವ ನಿರೀಕ್ಷೆ ಹೊಂದಲಾಗಿತ್ತು. ಆದರೆ ಟೀಂ ಇಂಡಿಯಾ ನಾಯಕ ರೋಹಿತ್, ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳದ ಕಾರಣ ದ್ವಿತೀಯ ಟೆಸ್ಟ್‌ನಿಂದಲೂ ಹೊರಗುಳಿದಿದ್ದಾರೆ. ಇದರೊಂದಿಗೆ ಹಿಟ್ ಮ್ಯಾನ್ ರೋಹಿತ್ ಅವರ 2022ರ ಕ್ರಿಕೆಟ್ ಪಯಣವೂ ಅಂತ್ಯಗೊಂಡಿದೆ. ಆದರೆ 2022ರಲ್ಲಿ ರೋಹಿತ್ ಶರ್ಮ ಅವರ ಬ್ಯಾಟ್‌ನಿಂದ ಒಂದೇ ಒಂದು ಶತಕ ಸಹ ಬಾರದಿರುವುದು ಹಿಟ್‌ಮ್ಯಾನ್
ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

2022ರಲ್ಲಿ ರೋಹಿತ್ ಶರ್ಮ ಒಟ್ಟು 8 ಏಕದಿನ, 2 ಟೆಸ್ಟ್ ಹಾಗೂ 29 T20I ಪಂದ್ಯಗಳನ್ನ ಆಡಿದ್ದು, 76* ರೋಹಿತ್ ಗಳಿಸಿರುವ ಗರಿಷ್ಠ ಸ್ಕೋರ್ ಆಗಿದೆ. ಆದರೆ 2012ರ ಬಳಿಕ ರೋಹಿತ್ ಶರ್ಮ ಕ್ಯಾಲೆಂಡರ್ ವರ್ಷದಲ್ಲಿ ಏಕೈಕ ಶತಕವನ್ನು ಬಾರಿಸದೆ ಇರುವುದು ಇದೇ ಮೊದಲು. ಹಿಟ್ ಮ್ಯಾನ್ 2013ರಿಂದ 2021ರವರೆಗೆ ಒಟ್ಟು 38 ಅಂತಾರಾಷ್ಟ್ರೀಯ ಶತಕ ಬಾರಿಸಿದ್ದಾರೆ. ಅದರಲ್ಲೂ 2019 ರೋಹಿತ್ ಕ್ರಿಕೆಟ್ ಜೀವನದ ಶ್ರೇಷ್ಠ ವರ್ಷ ಎನ್ನಬಹುದು.
2019ರಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದ ರೋಹಿತ್ ಶರ್ಮ ಏಕದಿನ ಕ್ರಿಕೆಟ್‌ನಲ್ಲಿ ಬರೋಬ್ಬರಿ 7 ಶತಕ ಬಾರಿಸಿದ್ದರು. ಅದರಲ್ಲೂ 2019ರ ODI ವಿಶ್ವಕಪ್‌ನಲ್ಲಿ ಅಬ್ಬರಿಸಿದ್ದ ಹಿಟ್ ಮ್ಯಾನ್, ಇಡೀ ಪಂದ್ಯಾವಳಿಯಲ್ಲಿ ಒಟ್ಟು 5 ಶತಕ ಬಾರಿಸಿ ಮಿಂಚಿದ್ದರು. ಆದರೆ 2022ರಲ್ಲಿ ನೀರಸ ಪ್ರದರ್ಶನದ ಮೂಲಕ ಫ್ಯಾನ್ಸ್‌ಗಳಿಗೆ ನಿರಾಸೆ ಮೂಡಿಸಿರುವ ರೋಹಿತ್, 2023ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಹೊಂದಿದ್ದಾರೆ.