TEACHER’S FIGHT IN GADAG: ಗಾಯಾಳು ಶಿಕ್ಷಕಿಯ ಆರೋಗ್ಯ ವಿಚಾರಿಸಿದ ಶಿಕ್ಷಣ ಸಚಿವರು: ಪರಾರಿಯಾಗಿರುವ ಶಿಕ್ಷಕನ ಪತ್ತೆಗೆ ಶೀಘ್ರ ಕ್ರಮ

ಗದಗ: ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕ ನಡೆಸಿದ ಅಮಾನವೀಯ ದಾಳಿಯಿಂದ ಗಂಭೀರವಾಗಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅತಿಥಿ ಶಿಕ್ಷಕಿ ಗೀತಾ ಯಲ್ಲಪ್ಪ ಅವರ ಆರೋಗ್ಯವನ್ನು ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ಅವರು ವಿಚಾರಿಸಿದರು.
ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಗಾಯಾಳು ಶಿಕ್ಷಕಿಯ ಕುಟುಂಬದವರೊಂದಿಗೆ ಮಾತನಾಡಿ ಧೈರ್ಯ ತುಂಬಿದರು. ಹಾಗೂ ಘಟನೆಯ ಸಮಗ್ರ ವಿವರ ಪಡೆದರು. ಹಾಗೂ ಶಿಕ್ಷಕಿಯ ಆರೋಗ್ಯ ಸ್ಥಿತಿ ಮತ್ತು ಚಿಕಿತ್ಸೆಯ ಕುರಿತು ವೈದ್ಯರಿಂದ ಮಾಹಿತಿ ಪಡೆದರು.
ಹದ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿದ್ದ ಆರೋಪಿ ಮುತ್ತಪ್ಪ ಹಡಗಲಿ, ಶಾಲೆಯ 4ನೇ ತರಗತಿ ವಿದ್ಯಾರ್ಥಿ ಭರತ್ ಮೇಲೆ ಹಲ್ಲೆ ನಡೆಸಿದ್ದರು. ಹಾಗೆಯೇ ಒಂದನೇ ಮಹಡಿಯಿಂದ ಕೆಳಗೆ ತಳ್ಳಿದ್ದರು ಎನ್ನಲಾಗಿದೆ.

ಬಳಿಕ ಶಿಕ್ಷಕಿ ಗೀತಾ ಯಲ್ಲಪ್ಪ ಅವರ ಮೇಲೂ ಸಲಾಕೆಯಿಂದ ಹಲ್ಲೆ ನಡೆಸಿದ್ದರು ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಭರತ್ ಮೃತಪಟ್ಟಿದ್ದಾನೆ. ಶಿಕ್ಷಕಿ ಗೀತಾ ಅವರಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರಾರಿಯಾಗಿರುವ ಆರೋಪಿ ಶಿಕ್ಷಕನ ಬಂಧನಕ್ಕೆ ಶೋಧ ಕಾರ್ಯ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಶಾಲೆಯಲ್ಲಿ ನಡೆದಿರುವ ಈ ಘಟನೆ ಅತ್ಯಂತ ದುರಾದೃಷ್ಟಕರ. ಶಾಲೆಯ ಆವರಣದಲ್ಲಿ ಇಂತಹ ಘಟನೆಗಳನ್ನು ಊಹಿಸಲು ಅಸಾಧ್ಯ. ಘಟನೆಯಿಂದ ಆತಂಕಗೊಂಡಿರುವ ಶಾಲೆಯ ಮಕ್ಕಳು ಮತ್ತು ಶಿಕ್ಷಕರಿಗೆ ಕೌನ್ಸಿಲಿಂಗ್ ಮಾಡಿ ಧೈರ್ಯ ತುಂಬಲಾಗುತ್ತದೆ. ಘಟನೆಗೆ ಕಾರಣ ಏನು ಎಂಬುದು ಆರೋಪಿಯ ಬಂಧನದ ಬಳಿಕ ತಿಳಿದು ಬರಲಿದೆ. ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಸಚಿವ ಬಿ.ಸಿ. ನಾಗೇಶ್ ಅವರು ಮಾಹಿತಿ ನೀಡಿದರು.

#BCNAGESH #EDUCATION MINISTER #SCHOOL #TEACHER #ASSULTED #DEATH #STUDENTS #KIMS

More News

You cannot copy content of this page