ADJUSTMENT POLITICIAN R ASHOK: ಮಂಡ್ಯಕ್ಕೆ ಸಚಿವ ಆರ್.ಅಶೋಕ್ ಎಂಟ್ರಿ: ಗೋ ಬ್ಯಾಕ್ ಪೋಸ್ಚರ್ ನಿಂದ ಸ್ವಾಗತ: ಕಮಲ‌ ಪಕ್ಷ ಅಲ್ಲೋಲ ಕಲ್ಲೋಲ

ಇನ್ನೇನು ಕೆಲವು ತಿಂಗಳಲ್ಲಿ ರಾಜ್ಯ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಹಠಾತ್ ಆಗಿ ಮಂಡ್ಯ ಉಸ್ತುವಾರಿಯನ್ನು ಬದಲಾವಣೆ ಮಾಡಿರುವುದು ಮಾತ್ರ ಮಂಡ್ಯ ಬಿಜೆಪಿ ಘಟಕದಲ್ಲಿ ಅಪಸ್ವರಕ್ಕೆ ನಾಂದಿ ಹಾಡಿದೆ.
ಬಿಜೆಪಿ ಕಾರ್ಯಕರ್ತರಲ್ಲಿ ಒಂದೆಡೆ ಗೊಂದಲ ಮೂಡಿದರೆ, ಇನ್ನೊಂದೆಡೆ ಅಸಮಾಧಾನ ಹೆಚ್ಚಿದೆ. ಜೆಡಿಎಸ್ ಜೊತೆ ಹೊಂದಾಣಿಕೆ ರಾಜಕಾರಣ ಮಾಡುವಲ್ಲಿ ಸಚಿವ ಆರ್ ಆಶೋಕ್ ಎತ್ತಿದ ಕೈ. ಈ ಹಿಂದಿನಿಂದಲೂ ಅವರು ಇದೇ ಕೆಲಸಮಾಡಿಕೊಂಡು ಬಂದಿದ್ದು, ಇದಕ್ಕೆ ಅನೇಕ ಉದಾಹರಣೆಗಳಿವೆ ಎನ್ನುತ್ತಾರೆ ಸ್ಥಳೀಯ ನಾಯಕರು.

ಇದುವರೆಗೂ ಮಂಡ್ಯ ಜಿಲ್ಲೆಯ ಉಸ್ತುವಾರಿಯಾಗಿದ್ದ ಸಚಿವ ಕೆ ಗೋಪಾಲಯ್ಯ ಅವರನ್ನು ರಾತ್ರೋರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬದಲಾಯಿಸಿ, ಆ ಸ್ಥಾನಕ್ಕೆ ಒಕ್ಕಲಿಗ ಎನ್ನುವ ಒಂದೇ ಉದ್ದೇಶದಿಂದ ಆರ್ ಅಶೋಕ್ ಅವರನ್ನು ನೇಮಿಸಲಾಗಿದೆ.
ಮಂಡ್ಯ ಜಿಲ್ಲೆಯಲ್ಲಿ ಈ ಹಿಂದೆ ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ, ಅವರ ಪುತ್ರ ಬಿ ವೈ ವಿಜಯೇಂದ್ರ ಅವರ ಹೋರಾಟದ ಫಲವಾಗಿ ಕೆ ಆರ್ ಪೇಟೆಯಲ್ಲಿ ಮೊದಲ ಬಾರಿಗೆ ಪಕ್ಷದ ಅಭ್ಯರ್ಥಿ ಗೆಲ್ಲುವುದರ ಮೂಲಕ ಖಾತೆಯನ್ನು ತೆರೆದಿತ್ತು. ಅದು ಅಂದಿನ ಬೈ ಎಲೆಕ್ಷನ್ ನಲ್ಲಿ.

ಆದರೆ, ಇದೀಗ ನಡೆಯುತ್ತಿರುವುದು ಸಾರ್ವತ್ರಿಕ ಚುನಾವಣೆ. ಈ ಚುನಾವಣೆಯಲ್ಲಿ ಸಂಘಟಿತ ಹೋರಾಟ ಅತ್ಯಗತ್ಯ. ಆದ್ದರಿಂದ ಮಂಡ್ಯ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪ್ರಧಾನಿ ಮೋದಿಯವರ ಸಾಧನೆಗಳನ್ನು ಮನೆ ಮನೆಗಳಿಗೆ ಹೇಳುವ ಕೆಲಸ ನಡೆಯುತ್ತದೆ.

ಇವೆಲ್ಲದರ ನಡುವೆ ಅಶೋಕ್ ಮಂಡ್ಯ ಜಿಲ್ಲೆಗೆ ನೀಡಿದ ಎಂಟ್ರಿ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿದೆ. ಜತೆಗೆ ಮಂಡ್ಯದಲ್ಲಿ ಹಲವು ಕ್ಷೇತ್ರದಲ್ಲಿ ಗೆಲ್ಲುವ ಭರವಸೆಯನ್ನು ಅಳಿಸಿಹಾಕಿದ್ದಾರೆ ಎಂದು ಸ್ಥಳೀಯ ಬಿಜೆಪಿ ಮುಖಂಡರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಅಶೋಕ್ ಅವರ ಎಂಟ್ರಿಯಿಂದ ಪಕ್ಷಕ್ಕಾಗಿ ಸದಾಕಾಲ ದುಡಿಯುತ್ತಿರುವ ಕಾರ್ಯಕರ್ತರ ಉತ್ಸಾಹ ಕುಗ್ಗಿಸಿದೆ. ಅವರು ಕೇವಲ ಪದ್ಮನಾಭನಗರದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸುವ ಉದ್ದೇಶದಿಂದ ಮಂಡ್ಯ ಜಿಲ್ಲೆಗೆ ಉಸ್ತುವಾರಿಯಾಗಿ ಬಂದಿದ್ದಾರೆ. ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿ ಪಕ್ಷವನ್ನು ಅವರು ಮೂಲೆಗುಂಪು ಮಾಡಲಿದ್ದಾರೆ ಎಂಬ ಮಾತುಗಳು ಮಂಡ್ಯಜಿಲ್ಲೆಯಲ್ಲಿ ಹರಿದಾಡುತ್ತಿವೆ.
ಅಶೋಕ್ ಒರ್ವ ಸ್ವಾರ್ಥ ರಾಜಕಾರಣಿಯಾಗಿದ್ದು. ಅವರನ್ನು ತಕ್ಷಣವೇ ಮುಖ್ಯಮಂತ್ರಿ ಅವರು ಬದಲಾಯಿಸಬೇಕು. ಇಲ್ಲದಿದ್ದಲ್ಲಿ ಗೆಲ್ಲುವ ಅವಕಾಶ ಬಿಜೆಪಿ ಪಕ್ಷ ಕೈಚೆಲ್ಲಲಿದೆ. ಇದು ಅನ್ಯಪಕ್ಷ ಅಂದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಗೆ ಲಾಭವಾಗಿ ಪರಿಣಮಿಸಲಿದೆ ಎನ್ನುವುದ ಸ್ಥಳೀಯ ಮುಖಂಡರ ವಾದವಾಗಿದೆ.

ಬಿಜೆಪಿ ಪಕ್ಷದ ಪ್ರಶ್ನಾತೀತ ನಾಯಕ ಅಮಿತ್ ಶಾ ಮಂಡ್ಯ ಜಿಲ್ಲೆಗೆ ಬಂದು ಯಾವ ಪಕ್ಷದೊಂದಿಗೂ ಹೊಂದಾಣಿಕೆ ಇಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದರು. ಇದರಿಂದ ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಇಮ್ಮಡಿಯಾಗಿತ್ತು. ಮುಂಬರುವ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮಂಡ್ಯ ಜಿಲ್ಲೆಗೆ ಕರೆಸುವ ಪ್ರಯತ್ನಗಳು ನಡೆಯುತ್ತಿರುವ ಮಧ್ಯೆಯೇ ಅಶೋಕ್ ಅವರ ಉಸ್ತುವಾರಿ ನೇಮಕ ಸಮಸ್ಯೆಯಾಗಿ ಪರಿಣಮಿಸಲಿದೆ.
ಬೇರೆ ಪಕ್ಷದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಅಶೋಕ್ ರದ್ದು
ಒಂದೆಡೆ ತಮ್ಮ ಸ್ವಪಕ್ಷೀಯರಿದಲೇ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಚಿವ ಅಶೋಕ್ ಸಮಾಜಾಯಿಸಿ ನೀಡಿದ್ದಾರೆ. ನಾನು ಮಂಡ್ಯ ಜಿಲ್ಲೆಗೆ ಬಂದಿರುವುದು ಬೇರೆ ಪಕ್ಷದ ಮುಖಂಡರಿಗೆ ಭಯ ಹುಟ್ಟಿಸಿದೆ ಎನ್ನುತ್ತಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಉಸ್ತುವಾರಿಯಾಗಿದ್ದ ಅಶೋಕ್ ಪಕ್ಷವನ್ನು ಅಧಿಕಾರಕ್ಕೆ ತರಲು ವಿಫಲರಾಗಿದ್ದರು ಎನ್ನಲಾಗಿದೆ.
ಹಾಗೆಯೇ ಆಪರೇಷನ್ ಕಮಲ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಅಶೋಕ್ ಅವರನ್ನು ಯಾವುದೇ ಲೆಕ್ಕಕ್ಕೆ ಇಟ್ಟುಕೊಂಡಿರಲಿಲ್ಲ. ಅದರ ಬದಲಾಗಿ ಅಶ್ವಥ್ ನಾರಾಯಣ್, ಸಿಪಿ ಯೋಗಿಶ್ವರ್, ರಮೇಶ್ ಜಾರಕಿಹೊಳಿ ಮುಂತಾದ ನಾಯಕರನ್ನು ಇಟ್ಟುಕೊಂಡು ಯಶಸ್ವಿ ಆಪರೇಷನ್ ಕಮಲ ನಡೆಸಿದ್ದರು.

ಆದ್ದರಿಂದ ಬೇರೆ ಪಕ್ಷದವರಿಗೆ ಭಯ ಹುಟ್ಟುವುದಿರಲಿ ಅವರ ಪಕ್ಷದ ಕಾರ್ಯಕರ್ತರಲ್ಲಿ ಆಕ್ರೋಶ ಮೂಡಿದೆ. ಅದರಲ್ಲೂ ಅವರ ಹೊಂದಾಣಿಕೆ ರಾಜಕಾರಣ ಪಕ್ಷದ ಸಾವಿರಾರು ಕಾರ್ಯಕರ್ತರನ್ನು ಭ್ರಮನಿರಸರನ್ನಾಗಿ ಮಾಡಿದೆ. ಪಕ್ಷ ಕಟ್ಟುವ ಚಾಕಚಕ್ಯತೆ, ಮುಖಂಡತ್ವ ಅಶೋಕ್ ಅವರಲ್ಲಿ ಇಲ್ಲ ಎನ್ನುವುದು ಮಾತ್ರ ಅವರನ್ನು ಹತ್ತಿರದಿಂದ ಬಲ್ಲವರು ಬಹಿರಂಗಪಡಿಸಿದ್ದಾರೆ.
ಪಕ್ಷದಲ್ಲಿನ ಅಪಸ್ಪರವನ್ನು ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಗೆ ಪರಿಹರಿಸಲಿದ್ದಾರೆ ಎನ್ನು ವುದು ಮಾತ್ರ ಇದೀಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

#R ASHOK #MINISTER #GOPALAIAH #INCHARGE MINISTER #MANDYA #BJP #ADJUSTMENT POLICIAN #JDS #PADMANABHANAGAR #BOYCOTT #GOBACK

More News

You cannot copy content of this page