IND v NZ T20I: ಇಂದು ಮೊದಲ ಟಿ20 ಕದನ: ಮತ್ತೊಂದು ಸರಣಿ ಗೆಲುವಿನತ್ತ ಟೀಂ ಇಂಡಿಯಾ ಚಿತ್ತ

ಪ್ರವಾಸಿ ನ್ಯೂಜಿ಼ಲೆಂಡ್ ವಿರುದ್ಧದ ಏಕದಿನ ಸರಣಿ ಕ್ಲೀನ್ ಸ್ಪೀಪ್ ಮಾಡಿ ಆತ್ಮವಿಶ್ವಾಸದ ಅಲೆಯಲ್ಲಿ ಟೀಂ ಇಂಡಿಯಾ ಬೀಗುತ್ತಿದ್ದು, ಮೂರು ಪಂದ್ಯಗಳ T20I ಸರಣಿಯಲ್ಲೂ ಗೆಲುವಿನ ನಾಗಾಲೋಟ ಮುಂದುವರಿಸುವ ನಿರೀಕ್ಷೆ ಹೊಂದಿದೆ. ಉಭಯ ತಂಡಗಳ ನಡುವಿನ ಮೊದಲ ಟಿ20 ಪಂದ್ಯ ಇಂದು ರಾಂಚಿಯಲ್ಲಿ ನಡೆಯಲಿದೆ.
ರಾಂಚಿಯಲ್ಲಿ ನಡೆಯಲಿರುವ ಮೊದಲ T20I ಪಂದ್ಯಕ್ಕಾಗಿ ಎರಡು ತಂಡಗಳು ತಯಾರಾಗಿದ್ದು, ಹಾರ್ದಿಕ್ ಪಾಂಡ್ಯ ಸಾರಥ್ಯದಲ್ಲಿ ಭಾರತ ಕಣಕ್ಕಿಳಿಯಲಿದೆ. ಪ್ರಸಕ್ತ ವರ್ಷದಲ್ಲಿ ‌ಅತ್ಯುತ್ತಮ ಫಾರ್ಮಿನಲ್ಲಿರುವ ಭಾರತ ಈ ಸರಣಿಯಲ್ಲೂ ಪ್ರಶಸ್ತಿ ಗೆಲ್ಲುವ ಫೇವರೆಟ್ ಆಗಿದೆ. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿರುವ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ‌ಯುವ ಆಟಗಾರ ಬಲದೊಂದಿಗೆ ಅಖಾಡಕ್ಕಿಳಿಯಲು ಸಜ್ಜಾಗಿದೆ.

ಇತ್ತೀಚೆಗೆ ಶ್ರೀಲಂಕಾ ವಿರುದ್ಧ ನಡೆದ ಟಿ20 ಸರಣಿ ಗೆಲುವಿನಲ್ಲಿ ಕಾಣಿಸಿಕೊಂಡಿದ್ದ ಭಾರತದ ವಿನ್ನಿಂಗ್ ಕಾಂಬಿನೇಷನ್ ತಂಡವನ್ನೇ ಕಿವೀಸ್ ವಿರುದ್ಧವೂ ಕಣಕ್ಕಿಳಿಸುವ ಸಾಧ್ಯತೆ ಇದೆ. ಇತ್ತೀಚೆಗೆ ನಡೆದ ODI ಸರಣಿಯಲ್ಲಿ ಸರ್ವಶ್ರೇಷ್ಠ ಪ್ರದರ್ಶನ ನೀಡಿ ಮಿಂಚಿದ್ದ ಆರಂಭಿಕ ಬ್ಯಾಟ್ಸ್‌ಮನ್‌ ಶುಭ್ಮನ್ ಗಿಲ್, T20Iನಲ್ಲೂ ಓಪನರ್ ಆಗಿ ಆಡುವುದು ಖಚಿತವಾಗಿದ್ದು, ನಾಯಕ ಹಾರ್ದಿಕ್ ಪಾಂಡ್ಯ ಇದನ್ನ ಸ್ಪಷ್ಟಪಡಿಸಿದ್ದಾರೆ. ಇವರೊಂದಿಗೆ ಎಡಗೈ ಬ್ಯಾಟ್ಸ್‌ಮನ್‌ ಇಶಾನ್ ಕಿಶನ್ ‌ಆಡುವುದು ಫಿಕ್ಸ್ ಆಗಿದೆ. ಹೀಗಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಹೊಂದಿದ್ದ ಪೃಥ್ವಿ ಶಾ, ತಮ್ಮ ಅವಕಾಶಕ್ಕಾಗಿ ಕಾಯಬೇಕಾಗಿದೆ.
ಉಳಿದಂತೆ ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರಾಹುಲ್ ತ್ರಿಪಾಠಿ ಈ ಸ್ಥಾನವನ್ನು ತುಂಬಲಿದ್ದು, ನಂತರದಲ್ಲಿ ‘ಟಿ20 ಸ್ಪೆಷಲಿಸ್ಟ್’ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಅವರು ಆಡಲಿದ್ದಾರೆ. ಇನ್ನೂ ಕೆಳ ಕ್ರಮಾಂಕದಲ್ಲಿ ಆಲ್ರೌಂಡರ್ ಅಕ್ಸರ್ ಪಟೇಲ್ ವೈಯಕ್ತಿಕ ಕಾರಣದಿಂದ ಟಿ20 ಸರಣಿಗೆ ಅಲಭ್ಯರಾಗಿರುವ ಹಿನ್ನೆಲೆಯಲ್ಲಿ ದೀಪಕ್ ಹೂಡ, ವಾಷಿಂಗ್ಟನ್ ಸುಂದರ್ ಆಡಲಿದ್ದಾರೆ.
ಬೌಲಿಂಗ್‌ ವಿಭಾಗದಲ್ಲಿ ಯುವ ವೇಗಿಗಳಾದ ಶಿವಂ ಮಾವಿ, ಅರ್ಶದೀಪ್ ಸಿಂಗ್ ಹಾಗೂ ಉಮ್ರಾನ್ ಮಲ್ಲಿಕ್ ಅವರುಗಳು ವೇಗದ ಬೌಲರ್‌ಗಳಾಗಿ ಆಡಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ಕುಲ್ದೀಪ್ ಯಾದವ್ ಅಥವಾ ಯುಜ್ವೇಂದ್ರ ಚಹಲ್ ಅವರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ತಂಡದ ಮ್ಯಾನೇಜ್ಮೆಂಟ್ ಚಿಂತನೆ ನಡೆಸುವ ಸಾಧ್ಯತೆ ಇದೆ.

ಮತ್ತೊಂದೆಡೆ ಏಕದಿನ ಸರಣಿ ಸೋಲಿನ ನಿರಾಸೆ ಅನುಭವಿಸಿರುವ ನ್ಯೂಜಿ಼ಲೆಂಡ್, T20I ಸರಣಿ ಗೆದ್ದು ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ತಂಡದ ರೆಗ್ಯೂಲರ್ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಅವರ ಅನುಪಸ್ಥಿತಿಯಲ್ಲಿ ಮಿಚೆಲ್ ಸ್ಯಾಂಟ್ನರ್ ಕಿವೀಸ್ ತಂಡವನ್ನ ಮುನ್ನಡೆಸಲಿದ್ದಾರೆ. ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಫಿನ್ ಅಲೆನ್ ಹಾಗೂ ಡೆವೋನ್ ಕಾನ್ವೆ ಅವರುಗಳು ಕಣಕ್ಕಿಳಿದರೆ. ಮಾರ್ಕ್ ಚ್ಯಾಂಪ್ಮನ್ ಮೊದಲ ಕ್ರಮಾಂಕದಲ್ಲಿ ಆಡಲಿದ್ದಾರೆ.
ಉಳಿದಂತೆ ಗ್ಲೆನ್ ಫಿಲಿಪ್ಸ್, ಡ್ಯಾರಿಲ್‌ ಮಿಚೆಲ್ ಹಾಗೂ ಮೈಕಲ್ ಬ್ರೇಸ್ವೆಲ್‌ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ಗಳಾಗಿ ನಾಯಕ ಮಿಚೆಲ್ ಸ್ಯಾಂಟ್ನರ್ ಜೊತೆಗೆ ಇಶ್ ಸೋಧಿ ಆಡುವ ಸಾಧ್ಯತೆ ಇದೆ. ವೇಗದ ಬೌಲಿಂಗ್‌ನಲ್ಲಿ ಬ್ಲೇರ್ ಟಿಕ್ನರ್, ಬೆನ್‌ ಲಿಸ್ಟರ್ ಹಾಗಾ ಲಾಕ್ಕಿ ಫೆರ್ಗುಸನ್ ಆಡುವ ನಿರೀಕ್ಷೆ ಇದೆ.

#T20 #2020 #CRICKET #HARDICK PANDYA #ROHIT SHARMA #VIRAT KOHLI #REST #RANCHI

More News

You cannot copy content of this page