ಬೆಂಗಳೂರು:ಫೆ.9: ಹಾಡು ಕದ್ದ ಪ್ರಕರಣ: ರಿಷಬ್, ಕಿರಗುಂದೂರು ಗೆ ನಿರೀಕ್ಷಣಾ ಜಾಮೀನು ಮಂಜೂರು ಬಾಕ್ಸಾಪೀಸ್ ನಲ್ಲಿ ಸದ್ದು ಮಾಡಿದ ಕಾಂತಾರ ಸಿನಿಮಾ ತಂಡ ಇದೇ ಭಾನುವಾರವಷ್ಟೇ ಶತದಿನೋತ್ಸವ ಆಚರಿಸಿಕೊಂಡಿದೆ. ಇದರ ಬೆನ್ನಲ್ಲೇ ವರಹಾ ರೂಪಂ ಹಾಡಿಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.

ನ್ಯಾಯಮೂರ್ತಿ ಎ.ಬದ್ರುದೀನ್ ಅವರು ವಿಚಾರಣೆಯನ್ನು ನಡೆಸಿದ ನಂತರ ಕಾಂತಾರ ಸಿನಿಮಾದ ನಟ ಮತ್ತು ನಿರ್ದೇಶಕ ರಿಷಬ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಕೆಲವು ಷರತ್ತುಗಳನ್ನು ಹಾಕುವ ಮೂಲಕ ಜಾಮೀನು ಮಂಜೂರು ಮಾಡಲಾಗಿದೆ.

ಸಿಟಿ ಸಿವಿಲ್ ಕೋರ್ಟ್ ನಿಂದ ಕಾಪಿರೈಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆದೇಶ ಬರುವ ತನಕ ಯಾವುದೇ ಸಂದರ್ಭದಲ್ಲಿ ವರಹಾ ರೂಪಂ ಹಾಡು ಬಳಕೆಗೆ ಅವಕಾಶವಿಲ್ಲ ಎಂಬ ಶರಷತ್ತನ್ನು ಹೈಕೋರ್ಟ್ ವಿಧಿಸಲಾಗಿದೆ. ಜೊತೆಗೆ, ಅರ್ಜಿದಾರರಿಗೆ ಮರು ವಿಚಾರಣೆ ಕೋರಿ ಅರ್ಜಿ ಸಲ್ಲಿಕೆಗೆ ಅವಕಾಶವಿದೆ ಎಂದು ನ್ಯಾಯಮೂರ್ತಿ ಎ.ಬದ್ರುದೀನ್ ಹೇಳಿದ್ದಾರೆ.


ಮಲಯಾಳಂ ನ ತೈಕ್ಕುಡಂ ಬ್ರಿಡ್ಜ್ ಸಂಸ್ಥೆಯು ನಮ್ಮ ಹಿಂದಿನ ಹಾಡನ್ನು ಕದ್ದು, ಕಾಂತಾರ ಸಿನಿಮಾದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿತ್ತು. ಈ ಸಂದರ್ಭದಲ್ಲಿ ಸಾಕ್ಷಿ ಸಮೇತ ದೂರು ನೀಡಿದ್ದ ಸಂಸ್ಥೆಯು, ನಮ್ಮ ನವರಸಂ ಹಾಡನ್ನು ಕಾಪಿ ಮಾಡಲಾಗಿದೆ ಎಂದಿತ್ತು. ಇನ್ನೂ ಮತ್ತೊಂದು ತಂಡ ಸಹ ನಮ್ಮ ಹಾಡಿನ ಟ್ಯೂನ್ ಅನ್ನು ಕದಿಯಲಾಗಿದೆ ಎಂದು ದೂರು ನೀಡಿತ್ತು. ಇವೆಲ್ಲವುಗಳ ಹಿನ್ನೆಲೆಯಲ್ಲಿ ದೂರು ದಾಖಲಿಸಿದ್ದ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅದಕ್ಕೆ ಸಂಬಂಧಿಸಿದಂತೆ ಕಾಂತಾರ ಸಿನಿಮಾ ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು ಮತ್ತು ರಿಷಬ್ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.

ಫೆ.12 ಮತ್ತು 13ಕ್ಕೆ ತನಿಖಾಧಿಕಾರಗಳ ಎದುರು ವಿಚಾರಣೆಗೆ ಹಾಜರಾಗಬೇಕು. 50 ಸಾವಿರ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಮೇಲೆ ಕೋರ್ಟ್ ಜಾಮೀನು ನೀಡಬೇಕು. ಯಾವುದೇ ಕಾರಣಕ್ಕೂ ಆರೋಪಿತರು ಸಾಕ್ಷಿಗಳನ್ನು ಬೆದರಿಸುವುದು, ಅರ್ಜಿದಾರರ ಮೇಲೆ ಒತ್ತಡ ಹೇರುವುದು ಮಾಡಬಾರದು. ಕೋರ್ಟ್ ನ ಅನುಮತಿ ಇಲ್ಲದೇ ಆರೋಪಿಗಳು ದೇಶದಿಂದ ಹೊರ ಹೋಗಬಾರದು. ಅಪರಾಧ ಕೆಲಸಗಳಲ್ಲಿ ಭಾಗಿಯಾಗಬಾರದು ಎಂದು ಷರತ್ತುಗಳನ್ನು ವಿಧಿಸಲಾಗಿದೆ.
ಕಾಂತಾರ ಸಿನಿಮಾ ಎಲ್ಲೆಡೆ ಸಖತ್ ಹೆಸರು ಮಾಡಿತು. ನೂರು ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿತು. ಈ ಸಂದರ್ಭದಲ್ಲಿ ಖುಷಿಯನ್ನು ಹಂಚಿಕೊಂಡಿದ್ದ ತಂಡವು ಕಾಂತಾರ 2 ನಿರ್ಮಾಣ ಕಡೆಗೆ ಚಿತ್ರತಂಡವು ಕೆಲಸ ಶುರು ಮಾಡಿದೆ. ಕಾಂತಾರ ಮುಂದುವರೆದ ಭಾಗಕ್ಕೆ ಸಂಬಂಧಿಸಿದಂತೆ ಈಗಾಗಲೇ ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿಕೊಂಡಿದೆ.