ನವದೆಹಲಿ: ಫೆ.9: ಕ್ರಿಕೆಟ್ ಅಂಗಳದಲ್ಲಿ ಹಲವು ವರ್ಷಗಳ ಕಾಲ ಮಿಂಚಿದ್ದ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಇದೀಗ ಕೃಷಿಯಲ್ಲಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ ನಂತರವೂ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಎಂ.ಎಸ್.ಧೋನಿ, ತಮ್ಮ ಜೀವನದ ಕ್ರಿಕೆಟ್ ಹೊರತಾದ ಕ್ಷಣಗಳನ್ನ ಅನುಭವಿಸುತ್ತಿದ್ದಾರೆ. ವಿಶೇಷವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಧೋನಿ, ಟ್ರ್ಯಾಕ್ಟರ್ ಮೂಲಕ ಜಮೀನಿನಲ್ಲಿ ಕೆಲಸ ಮಾಡುವಲ್ಲಿ ಬ್ಯುಸಿ ಆಗಿದ್ದಾರೆ.

ಪ್ರತಿಬಾರಿಯೂ ಒಂದಿಲ್ಲೊಂದು ಹೊಸ ವಿಷಯಗಳನ್ನ ಕಲಿಯುವ ಬಗ್ಗೆ ಆಸಕ್ತಿ ತೋರುವ ಧೋನಿ, ಇದೀಗ ಕೃಷಿ ಕ್ಷೇತ್ರದ ಬಗ್ಗೆ ಆಸಕ್ತಿ ತೋರಿದ್ದಾರೆ. ತಮ್ಮ ಹೊಸ ಕೆಲಸ ಬಗ್ಗೆ ಮಹೇಂದ್ರ ಸಿಂಗ್ ಧೋನಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಫೋಟೋ ಮತ್ತು ವಿಡಿಯೋ ಶೇರ್ ಮಾಡಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನೂ ವಿಶೇಷವೆಂದರೆ ಕ್ರಿಕೆಟ್ನಿಂದ ಹೊರಗುಳಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಧೋನಿ ಸಕ್ರಿಯವಾಗಿರಲಿಲ್ಲ. ಆದರೆ ಇದೀಗ ಎರಡು ವರ್ಷಗಳ ಬಳಿಕ ಕ್ಯಾಪ್ಟನ್ ಕೂಲ್, ಕೃಷಿಯಲ್ಲಿ ತೊಡಗಿಸಿಕೊಂಡಿರುವ ವಿಡಿಯೋವನ್ನ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ಧೋನಿ, ಐಪಿಎಲ್ ಟೂರ್ನಿಯಲ್ಲಿ ಇನ್ನೂ ಸಕ್ರಿಯವಾಗಿದ್ದಾರೆ. ಅಲ್ಲದೇ ಇತ್ತೀಚೆಗೆ 2023ರ ಐಪಿಎಲ್ ಟೂರ್ನಿಗೆ ಸಿದ್ಧತೆ ಆರಂಭಿಸಿದ್ದ ಧೋನಿ, ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ಸಹ ಆರಂಭಿಸಿದ್ದರು.