ಹೊಸದಿಲ್ಲಿ.ಫೆ.14: ಫೆಬ್ರವರಿ 14 ಅಂದರೆ ವಿಶ್ವಾದ್ಯಂತ ಪ್ರೇಮಿಗಳ ದಿನವೆಂದೇ ಜನಪ್ರಿಯ. ಆದರೆ ಇದೀಗ ಫೆಬ್ರವರಿ 14ನ್ನು ಕೇಂದ್ರ ಸರಕಾರ ಅಪ್ಪಿಕೋ ದನ ದಿನವನ್ನಾಗಿ ಆಚರಿಸಿಲು ತೀರ್ಮಾನಿಸಿದೆ. ಅಷ್ಟು ಮಾತ್ರವಲ್ಲದೆ ಎಲ್ಲರೂ ಅಂದು ಹಸುವನ್ನು ಅಪ್ಪಿಕೊಳ್ಳುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯಬೇಕು ಎಂದು ಕೇಂದ್ರ ಪಶು ಸಂಗೋಪನೆ ಮತ್ತು ಹೈನುಗಾರಿಕಾ ಸಚಿವಾಲಯದಡಿ ಕಾರ್ಯನಿರ್ವಹಿಸುವ ಕೇಂದ್ರ ಪ್ರಾಣಿ ಕಲ್ಯಾಣ ಮಂಡಳಿ ಮನವಿ ಮಾಡಿದೆ.

ದನವು ಭಾರತೀಯ ಸಂಸ್ಕೃತಿ ಮತ್ತು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ಎಂಬುದು ನಮಗೆಲ್ಲ ತಿಳಿದಿರುವ ಸಂಗತಿಯಾಗಿದೆ. ಗೋಸಂಪತ್ತು ಮತ್ತು ಜೀವ ವೈವಿಧ್ಯತೆಗಳ ಮೇಲೆ ನಮ್ಮ ಉಳಿವು ನಿಂತಿದೆ. ಕಾಮಧೇನು,ರೈತರ ಸಂಗಾತಿ, ರೈತರ ಗೆಳೆಯ, ಸಿರಿ ಸಮೃದ್ಧಿ ಪ್ರತೀಕ ಎಂಬೆಲ್ಲಾ ಹೆಸರಿನಿಂದ ಕರೆಯುವ ಹಸುವನ್ನು ಅಪ್ಪಿಕೊಳ್ಳುವುದರಿಂದ ಹಸುವಿನ ಬಗ್ಗೆ ಕಳಕಳಿ,ಕಾಳಜಿ,ಮಮತೆ ಮೂಡಲಿದೆ. ಇದು ಭಾವನಾತ್ಮಕ ಶ್ರೀಮಂತಿಕೆಯ ಸಂಕೇತವಾಗಿರುವುದು ಮಾತ್ರವಲ್ಲದೆ ಇದರಿಂದ ವೈಯಕ್ತಿಕ ಮತ್ತು ಸಾಮೂಹಿಕ ಸಂತೋಷ ವೃದ್ಧಿಯಾಗುತ್ತದೆ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ.



ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಅನೇಕ ವೈದಿಕ ಸಂಪ್ರದಾಯಗಳು ಕಣ್ಮರೆಯಾಗಿವೆ. ಅವರನ್ನು ಮತ್ತೆ ಮುನ್ನೆಲೆಗೆ ತರುವ ಅಗತ್ಯವಿದೆ. ಹೀಗಾಗಿ ಫೆ 14ರಂದು ಪ್ರೇಮಿಗಳು ಯುವಕ ಯುವತಿಯರಿಗೆ ಪ್ರೇಮ ನಿವೇದನೆ ಬದಲಿಗೆ ಗೋಮಾತೆಯನ್ನು ಅಪ್ಪಿಕೊಳ್ಳಿ. ಇದು ನಮ್ಮಲ್ಲಿ ಧನಾತ್ಮಕ ಶಕ್ತಿಯ ಸಂಚಲನ ಉಂಟುಮಾಡಲಿದೆ ಎಂದು ತಿಳಿಸಿದೆ.



ಕೇಂದ್ರ ಪ್ರಾಣಿ ಕಲ್ಯಾಣ ಮಂಡಳಿಯ ಈ ಮನವಿಗೆ ಮಂಡಳಿಯ ಕಾರ್ಯದರ್ಶಿ ಎಸ್ ಕೆ ದತ್ತಾ ಅವರು ಸಹಿ ಮಾಡಿದ್ದಾರೆ. ಕೇಂದ್ರ ಪಶು ಸಂಗೋಪನೆ ಮತ್ತು ಹೈನುಗಾರಿಕಾ ಸಚಿವಾಲಯದ ನಿರ್ದೇಶನದಂತೆ ಈ ಮನವಿಯನ್ನು ಪ್ರಕಟಿಸಿರುವುದಾಗಿ ಮಂಡಳಿ ಸ್ಪಷ್ಟಪಡಿಸಿದೆ.
#ANIMAL HUG DAY #CENTRAL ANIMAL WELFARE BOARD #VALENTINE DAY #FEBRUARY 14TH #COW LOVE