ಕಾರವಾರ :ಫೆ.9: ಬಿಜೆಪಿ ಶಾಸಕ ಸಿಟಿ ರವಿ ಜಾತ್ಯಾತೀತತೆ ಪದದ ಅರ್ಥ ಗೊತ್ತಿದ್ಯಾ? ಅವರಿಗೆ ಗೊತ್ತಿರುವುದು ನಾವೆಲ್ಲ ಮುಂದು, ನೀವೆಲ್ಲ ಹಿಂದು ಅಷ್ಟೇ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸಿಟಿ ರವಿ ವಿರುದ್ಧ ಕಿಡಿಕಾರಿದರು.

ಹೊನ್ನಾವರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್ ಡಿಕೆ, ಅವರ ಅವಧಿಯಲ್ಲಿ ಪ್ರತಿಯೊಂದು ಸಮಾಜದವರೊಂದಿಗೆ ಚೆಲ್ಲಾಟ ಆಡಿದ್ದಾರೆ. ಆದ್ರೆ ನಮ್ಮ ಅಧಿಕಾರದ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿ ಹಿಂದುಳಿದವರಿಗೆ ಅವಕಾಶ ಸಿಕ್ಕಿದೆ. ನಿಮ್ಮಿಂದ ನಾವು ಕಲಿಯುವುದು ಬೇಕಾಗಿಲ್ಲ ಎಂದು ತಿರುಗೇಟು ಕೊಟ್ಟರು.

ಲಾಟರಿ ಸಿಎಂ ವಿಚಾರ
ನನಗೆ ಎರಡು ಬಾರಿ ಸಿಎಂ ಸ್ಥಾನ ಲಾಟರಿ ಹೊಡೆದಿದೆ. ಈ ಬಾರಿ ಬಂಪರ್ ಲಾಟರಿ ಹೊಡೆಯುತ್ತೆ ಎಂದರು. ಬಿಜೆಪಿ ಸಿಎಂಗೆ ಅರ್ಹತೆಯಿಲ್ಲ ಎಂದು ನಾನು ಹೇಳಿಲ್ಲ. ನನ್ನ ಬಗ್ಗೆ ಮಾತಾಡೋದಿಕ್ಕೆ ಸಚಿವ ಬಿ.ಸಿ ಪಾಟೀಲ್ ಅವರಿಗೆ ಏನು ಅರ್ಹತೆ ಇದೆ. ನನ್ನ ಬಗ್ಗೆ ಮಾತನಾಡುವುದಿದ್ರೆ ಹುಷಾರಾಗಿ ಪದಬಳಕೆ ಮಾಡಿ ಎಂದು ಎಚ್ಚರಿಕೆ ನೀಡಿದರು. ಆತ್ಮಸಾಕ್ಷಿ ಮೇಲೆ ರಾಜಕೀಯ ಮಾಡುವವನು ನಾನು ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿಕೆಗೆ ಹೆಚ್‌ಡಿಕೆ ತಿರುಗೇಟು ನೀಡಿದರು.