ಆನೇಕಲ್: ಪ್ರಪ್ರಂಚದ ಪರಿವೆ ಅಷ್ಟಾಗಿ ಇಲ್ಲದಿರುವ ಯುಕೆಜಿ ಮಗುವನ್ನು ಫೈಲ್ ಎಂದು ಆ್ಯಪ್ ಒಂದರಲ್ಲಿ ನಮೂದಿಸಿದ ಖಾಸಗಿ ಶಾಲೆ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಅದರಲ್ಲೂ ಅದೇ ಪಕ್ಷದ ಈ ಹಿಂದಿನ ಶಿಕ್ಷಣ ಸಚಿವರು ತಮ್ಮ ಟ್ವಿಟರ್ ಹಾಗೂ ಫೇಸ್ ಖಾತೆಯಲ್ಲಿ ಶಾಲೆಯ ಯಡವಟ್ಟಿನ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

ಯುಕೆಜಿಯಲ್ಲಿ ತನ್ನ ಮಗಳು ಫೈಲ್ ಆಗಿದ್ದಾಳೆ ಎಂದು ಮನೋಜ್ ಬಾದಲ್ ಎನ್ನುವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಸಮೀಪದಲ್ಲಿರುವ ಸೆಂಟ್ ಜೋಸೆಫ್ ಶಾಮಿನೇಡ್ ಅಕಾಡೆಮಿಯಲ್ಲಿ ಯುಕೆಜಿ ವ್ಯಾಸಂಗ ಮಾಡುತ್ತಿರುವ ತನ್ನ ಮಗಳನ್ನು ಫೈಲ್ ಮಾಡಿದ್ದಾರೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಪೋಷಕರ ಆಕ್ರೋಶಕ್ಕೆ ಸಾಕಷ್ಟು ಜನರು ರೀ ಟ್ವೀಟ್ ಮಾಡಿ ನಮ್ಮ ಶಿಕ್ಷಣ ವ್ಯವಸ್ಥೆಯ ಕನ್ನಡಿ ಇದಾಗಿದೆ ಎಂದು ದೂರಿದ್ದರು. ಇದನ್ನು ಗಮನಿಸಿದ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತಮ್ಮ ಆಕ್ರೋಶವನ್ನು ಹೊರಹಾಕಿದ್ದರು.

ಯುಕೆಜಿ ವಿದ್ಯಾರ್ಥಿನಿಯನ್ನು ಪೈಲ್ ಮಾಡಿರುವುದು ಮಹಾ ಪಾಪದ ಕೃತ್ಯ ಎಂದಿರುವ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಿಕ್ಷಣ ಸಂಸ್ಥೆಗೆ ತಲೆಯೂ ಇಲ್ಲ, ಹೃದಯವೂ ಅದಕ್ಕಿಂತ ಮೊದಲೇ ಇಲ್ಲ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಈ ಆಕ್ರೋಶದಿಂದ ಕೂಡಲೇ ಎಚ್ಚೆತ್ತುಕೊಂಡ ಆನೇಕಲ್ ಕ್ಷೇತ್ರ ಶಿಕ್ಷಣಾಧಿಕಾರಿ ಜಯಲಕ್ಷ್ಮೀ ಅವರು ಯುಕೆಜಿ ಮಗುವನ್ನು ಫೈಲ್ ಮಾಡಿರುವ ಕುರಿತು ಶಾಲಾ ಆಡಳಿತ ಮಂಡಳಿ ಮಾಹಿತಿ ನೀಡಬೇಕು ಎಂದು ಕೇಳಿದ್ದರು. ಇದರಲ್ಲಿ ಶಾಲೆಯ ತಪ್ಪು ಕಂಡು ಬಂದಲ್ಲಿ ಶಾಲೆಗೆ ನೀಡಿರುವ ಅನುಮತಿಯನ್ನ ರದ್ದು ಮಾಡುವುದಾಗಿ ನೋಟಿಸ್ ನೀಡಿ ಎಚ್ಚರಿಕೆಯನ್ನು ನೀಡಿದ್ದಾರೆ.

ಇನ್ನೂ ಶಿಕ್ಷಣ ಇಲಾಖೆಯಿಂದ ನೋಟಿಸ್ ಜಾರಿ ಮಾಡುತ್ತಿದ್ದಂತೆ ಎಚ್ಚೆತ್ತ ಶಾಲೆಯ ಆಡಳಿತ ಮಂಡಳಿ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ಬೇಸಿಗೆ ರಜೆಗೂ ಮೊದಲು ಶಾಲೆಯಲ್ಲಿ ಕಿರು ಪರೀಕ್ಷೆಯನ್ನು ಮಾಡಲಾಗಿತ್ತು. ಪರೀಕ್ಷೆಯಲ್ಲಿ ರೈಮ್ಸ್ ವಿಭಾಗದಲ್ಲಿ 40ಕ್ಕೆ ಕೇವಲ ಐದು ಅಂಕವನ್ನು ಮಗು ಪಡೆದಿತ್ತು.
ಮಗುವಿನ ಮುಂದಿನ ಭವಿಷ್ಯದ ಕಾರಣಕ್ಕೆ ಸಿ ಗ್ರೇಡ್ ನೀಡಲಾಗಿತ್ತು. ಪೋಷಕರಿಗೆ ನೀಡಿದ ಮಾರ್ಕ್ಸ್ ಕಾರ್ಡ್ ನಲ್ಲಿ ಎಲ್ಲಿಯೂ ಕೂಡ ಶಾಲೆಯ ಆಡಳಿತ ಮಂಡಳಿ ಮಗು ಫೈಲ್ ಆಗಿದೆ ಎಂದು ನಮೂದಿಸಿಲ್ಲ. ಜೊತೆಗೆ ಪೋಷಕರನ್ನು ಸಂಪರ್ಕಿಸಲು ಹಲವು ಬಾರಿ ಮೇಲ್ ಕಳುಹಿಸಿದ್ದು, ಇದಕ್ಕೆ ಪೋಷಕರು ಹೊರ ರಾಜ್ಯದಲ್ಲಿರುವುದಾಗಿ ಉತ್ತರಿಸಿದ್ದಾರೆ.

ಪೋಷಕರಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಟೀಚ್ ಮೆಟ್ ಆ್ಯಪ್ ನಲ್ಲಿ ವಿದ್ಯಾರ್ಥಿಗಳ ಪ್ರೊಗ್ರೆಸ್ ರಿಪೋರ್ಟ್ ಅಪ್ಲೋಡ್ ಮಾಡಲಾಗುತ್ತದೆ. ಈ ವೇಳೆ ಈ ಆಪ್ ನಲ್ಲಿ 35% ಗಿಂತ ಕಡಿಮೆ ಅಂಕ ಬಂದರೆ ಆ್ಯಪ್ ಡಿಪಾಲ್ಟ್ ಸೆಟ್ಟಿಂಗ್ ಪ್ರಕಾರ ಪೈಲ್ ಎಂದು ನಮೂದಿಸುತ್ತದೆ.

ಈ ಕುರಿತು ಶಾಲೆಯಿಂದಲೂ ಆಪ್ ಕಂಪನಿಗೆ ಪತ್ರವನ್ನು ಬರೆಯಲಾಗಿದೆ. ಆ್ಯಪ್ ಎಡವಟ್ಟಿನಿಂದಾಗಿ ಈ ಸಮಸ್ಯೆ ಎದುರಾಗಿದ್ದು ಇನ್ನು ಮುಂದೆ ಇಂತಹ ಪ್ರಮಾದ ಆಗದಂತೆ ನೋಡಿಕೊಳ್ಳಲಾಗುವುದು ಸಮಸ್ಯೆ ಆಗಿರುವುದಕ್ಕೆ ಕ್ಷಮೆ ಕೇಳುವುದಾಗಿ ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.
#sT JOSEPH CHAMINADE aCADEMY #DEEPAHALLI #WHITEFEID #FAIL #UKG STUDENT #CHILD FAIL #RESULT #SOCIAL MEDIA #FOMER EDUCATION MININISTE #S SURESHKUMAR #UNHAPPY #CRITICIZED