ಬೆಂಗಳೂರು : ಮೈಸೂರು -ಬೆಂಗಳೂರು ನೂತನವಾಗಿ ನಿರ್ಮಾಣವಾಗಿರುವ ಎಕ್ಸ್ ಪ್ರೆಸ್ ವೇ ನಲ್ಲಿ ಸಂಚರಿಸುವ ನಿಗಮದ ಎಲ್ಲಾ ಸಾರಿಗೆಗಳಲ್ಲಿ ಪ್ರಯಾಣಿಕರಿಂದಲೇ ಬಳಕೆದಾರರ ಶುಲ್ಕ ವಸೂಲಾತಿಗೆ ಕೆಎಸ್ ಆರ್ ಟಿಸಿ ತೀರ್ಮಾನ ಮಾಡಿದ್ದು, ಇಂದಿನಿಂದಲೇ ಜಾರಿಯಾಗಿದೆ.
ಈಗಾಗಲೇ ಬೆಲೆಏರಿಕೆಯಿಂದ ಬಸವಳಿದಿರುವ ಜನಸಾಮಾನ್ಯರಿಗೆ ಮತ್ತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬರೆ ಎಳೆದಿದೆ. ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆ ನಿರ್ಮಾಣ ಮಾಡಿ, ಟೋಲ್ ಅನ್ನು ಪಡೆಯಲಾಗುತ್ತಿದೆ. ಈ ಟೋಲ್ ನ ಹೊರೆಯನ್ನು ಕೆಎಸ್ ಆರ್ ಟಿಸಿ ಪ್ರಯಾಣಿಕರ ಮೇಲೆ ಹೇರಲು ಮುಂದಾಗಿದೆ. ಇದು ಜನಸಾಮಾನ್ಯರ ಕಣ್ಣು ಕೆಂಪಾಗಿಸುವಂತೆ ಮಾಡಿದೆ.

ಜನಸಾಮಾನ್ಯರ ಟೋಲ್ ಹಣದಿಂದ ನಿರ್ಮಾಣವಾದ ಈ ಎಕ್ಸ್ ಪ್ರೆಸ್ ಹೈವೇ, ಪ್ರತಿಯೊಬ್ಬ ವಾಹನ ಸವಾರರು ವಾಹನ ತೆರಿಗೆ, ಟೋಲ್ ಹಾಗೂ ಬಸ್ ಗಳಲ್ಲಿ ಬಳಕೆದಾರರ ಶುಲ್ಕ ಪಾವತಿಸುತ್ತಿದ್ದಾರೆ. ಇದರಿಂದ ಈ ರಸ್ತೆ ನಿರ್ಮಾಣ ನಾವು ಮಾಡಿದ್ದು, ತಾವು ಮಾಡಿದ್ದು, ಎಂದು ಹೇಳಲು ಯಾವುದೇ ರಾಜಕೀಯ ಪಕ್ಷದ ನಾಯಕರಿಗೆ ನೈತಿಕ ಹಕ್ಕಿಲ್ಲ ಎಂದು ಜನಸಾಮಾನ್ಯರು ಕಿಡಿಕಾರಿದ್ದಾರೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಎನ್ ಎಚ್ ಸಂಖ್ಯೆ-275, ಬೆಂಗಳೂರು-ಮೈಸೂರು ಮಾರ್ಗದಲ್ಲಿ ಹೊಸದಾಗಿ ನಿರ್ಮಿಸಿರುವ ಎಕ್ಸ್ ಪ್ರೆಸ್ ಹೈವೇಯ ಮೊದಲನೇ ಹಂತದ ಬೆಂಗಳೂರು-ನಿಡಘಟ್ಟ ಮಧ್ಯದಲ್ಲಿನ ಕಣಿಮಿಣಿಕೆ ಟೋಲ್ ಮುಖಾಂತರ ಸಂಚರಿಸುವ ಬಸ್ಸುಗಳಿಗೆ ಇಂದಿನಿಂದ ಅಂದರೆ ಮಾರ್ಚ 14 ರಿಂದ ರಸ್ತೆ ಬಳಕೆದಾರ ಶುಲ್ಕವನ್ನು ಸಂಗ್ರಹಿಸಲು ಪ್ರಾರಂಭಿಸಿದೆ.
ಪ್ರಯಾಣ ದರದಲ್ಲಿ ಎಷ್ಟು ಏರಿಕೆ ?
ಸದರಿ ವೆಚ್ಚವನ್ನು ಸರಿದೂಗಿಸಲು ಸದರಿ ಎಕ್ಸೆ ಪ್ರೆಸ್ ಹೈವೇಯ ಮೂಲಕ ಕಾರ್ಯಾಚರಣೆಯಾಗುವ ನಿಗಮದ ಕರ್ನಾಟಕ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುವ ತಲಾ ಪ್ರಯಾಣಿಕರಿಂದ ರೂ. 15/- ರೂಪಾಯಿ, ರಾಜಹಂಸ ಬಸ್ಸುಗಳಲ್ಲಿ ರೂ. 18/- ರೂಪಾಯಿ ಹಾಗೂ ಇತರೆ ಬಸ್ಸುಗಳು/ಮಲ್ಟಿ ಆಕ್ಸಲ್ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಂದ ರೂ. 20/- ರೂಪಾಯಿಯನ್ನು ಬಳಕೆದಾರ ಶುಲ್ಕವನ್ನಾಗಿ ವಸೂಲು ಮಾಡುತ್ತಿದೆ.
ಈ ಬಳಕೆದಾರ ಶುಲ್ಕವು ಸಂಪೂರ್ಣವಾಗಿ ಎಕ್ಸೆ ಪ್ರೆಸ್ ಹೈವೇ ಮೂಲಕ ಕಾರ್ಯಾಚರಣೆಯಾಗುವ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮಾತ್ರ ಅನ್ವಯವಾಗುವುದು. ಇನ್ನುಳಿದ ಸಾರಿಗೆಗಳಿಗೆ ಇದು ಅನ್ವಯಿಸುವುದಿಲ್ಲ. ಎಲ್ಲಾ ಟೋಲ್ ರಸ್ತೆಗಳಲ್ಲಿ ಈ ಪದ್ದತಿಯನ್ನು ಜಾರಿಗೊಳಿಸಲಾಗಿದೆ ಎಂದು ಕೆಎಸ್ ಆರ್ ಟಿಸಿ ಪ್ರಕಟಣೆ ತಿಳಿಸಿದೆ