ಹುಬ್ಬಳ್ಳಿ: ಅವರೆಲ್ಲರೂ ನೂರು ಇನ್ನೂರು ರೂಪಾಯಿಗಳಿಗೆ ಹಗಲಿರುಳು ದುಡಿಯುವ ಶ್ರಮ ಜೀವಿಗಳು. ಜೀವನ ನಡೆಸುವುದೇ ಕಷ್ಟವಾಗಿರುತ್ತದೇ. ಇಂತಹದರಲ್ಲಿ ಮಕ್ಕಳ ಶಿಕ್ಷಣದೊಂದು ಹೊರೆಯಾಗಿದೆ. ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಮಹತ್ವದ ನಿರ್ಧಾರದ ಮೂಲಕ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಿಸ್ತಿವಿ ನೋಡಿ..

ಸಾರಿಗೆ ಇಲಾಖೆಯು ಟ್ಯಾಕ್ಸಿ, ಆಟೋ ಚಾಲಕರ ಹಾಗೂ ಮ್ಯಾಕ್ಸಿಕ್ಯಾಬ್ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ನೀಡಲು ಸರ್ಕಾರ ಮುಂದಾಗಿದೆ. ಹೌದು.. ಆಟೋ ಚಾಲಕರು, ಟ್ಯಾಕ್ಸಿ ಚಾಲಕರ ಮಕ್ಕಳಲ್ಲಿ ಶಿಕ್ಷಣದ ಕನಸು ಇರುತ್ತದೆ. ಆದರೆ ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ಸಾಧ್ಯವಾಗದೇ ಓದನ್ನು ಅರ್ಧಕ್ಕೆ ನಿಲ್ಲಿಸುತ್ತಾರೆ. ಇಂತಹ ಪರಿಸ್ಥಿತಿ ನಿವಾರಣೆ ಮಾಡಲು ಈಗ ಸಾರಿಗೆ ಇಲಾಖೆಯು ಪ್ರಾದೇಶಿಕ ಸಾರಿಗೆ ಅಧಿಕಾರಗಳ ನೇತೃತ್ವದಲ್ಲಿ ಅರ್ಹ ಪಲಾನುಭವಿಗಳಿಗೆ ಸೂಕ್ತ ರೀತಿಯಲ್ಲಿ ಯೋಜನೆ ತಲುಪಿಸುವ ಕಾರ್ಯಕ್ಕೆ ಮುಂದಾಗಿದೆ. ಚಾಲಕರ ಮಕ್ಕಳಿಗೆ ಮೆಟ್ರಿಕ್ ನಂತರದ ಶಿಕ್ಷಣಕ್ಕೆ ವಿದ್ಯಾನಿಧಿ ಸ್ಕಾಲರ್ಶಿಪ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಟೆಕ್ನಿಕಲ್, ನಾನ್ ಟೆಕ್ನಿಕಲ್ ಸೇರಿದಂತೆ ಎಲ್ಲ ರೀತಿಯ ಸ್ನಾತಕ, ಸ್ನಾತಕೋತ್ತರ ಪದವಿಗೆ ಸೂಕ್ತ ರೀತಿಯಲ್ಲಿ ಸ್ಕಾಲರ್ಶಿಪ್ ನೀಡಲು ಮುಂದಾಗಿದೆ.

ಇನ್ನೂ ಪಿಯುಸಿ, ಐಟಿಐ, ಡಿಪ್ಲೊಮಾ ವ್ಯಾಸಂಗಕ್ಕೆ ಪುರುಷರಿಗೆ 2500, ಮಹಿಳೆಯರಿಗೆ 3000 ನೀಡಲಾಗುತ್ತದೆ. ಬಿಎ, ಬಿ.ಎಸ್.ಸಿ, ಬಿಕಾಂ, ಬಿಟೆಕ್, ಬಿಬಿಎ ಸೇರಿದಂತೆ ಪದವಿ ವಿದ್ಯಾರ್ಥಿಗಳಿಗೆ 5000 ಮತ್ತು 5500 ಹಾಗೂ ಸ್ನಾತಕೋತ್ತರ ಪದವಿ ಓದುತ್ತಿರುವವರಿಗೆ 10,000 ಮತ್ತು 11,000 ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
ಒಟ್ಟಿನಲ್ಲಿ ಸಾರಿಗೆ ಇಲಾಖೆಯು ಇಂತಹದೊಂದು ಮಹತ್ವದ ಕಾರ್ಯಕ್ಕೆ ಮುಂದಾಗಿದ್ದು, ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಅರ್ಜಿ ಸಲ್ಲಿಸುವ ಮೂಲಕ ಸದುಪಯೋಗ ಪಡಿಸಿಕೊಳ್ಳಲು ಸಾರಿಗೆ ಇಲಾಖೆ ಮನವಿ ಮಾಡಿದೆ.