ರಾಮನಗರ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಎಕ್ಸ್ ಪ್ರೆಸ್ ವೇನಲ್ಲಿ ಇಂದಿನಿಂದ ಟೋಲ್ ಸಂಗ್ರಹ ಆರಂಭವಾಗಿದೆ. ಶೇಷಗಿರಿಹಳ್ಳಿ ಟೋಲ್ ಪ್ಲಾಜಾ ಬಳಿ ಟೋಲ್ ಸಂಗ್ರಹ ಇಂದು ಬೆಳಿಗ್ಗೆ 8 ಘಂಟೆಯಿಂದ ಆರಂಭವಾಗಿದೆ.
ಆದರೆ, ಟೋಲ್ ಸಂಗ್ರಹ ವಿರೋಧಿಸಿ ಕಾಂಗ್ರೆಸ್ ಮತ್ತು ಸ್ಥಳೀಯ ಸಂಘಟನೆಗಳು ಟೋಲ್ ಪ್ಲಾಜಾ ಮುಂಭಾಗ ಪ್ರತಿಭಟನೆ ನಡೆಸಿದವು. ರಸ್ತೆಗಳಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು, ಕಪ್ಪು ಪಟ್ಟಿ ಪ್ರದರ್ಶಿಸಿ ಪ್ರತಿಭಟಿಸಿದರು.

ಬಿಜೆಪಿ ಸರ್ಕಾರದ ವಿರುದ್ದ ಘೋಷಣೆ ಕೂಗಿದ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಟೋಲ್ ಸಂಗ್ರಹ ವಿರೋಧಿಸಿ ಸ್ಥಳದಲ್ಲಿದ್ದ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಟೋಲ್ ಶುಲ್ಕ ಸಂಗ್ರಹಿಸಬೇಕು ಹಾಗೂ ಸ್ಥಳೀಯರಿಗೆ ಅನುಕೂಲವಾಗುವಂತೆ ಸರ್ವೀಸ್ ರಸ್ತೆಯನ್ನು ಮಾಡಬೇಕೆಂದು ಆಗ್ರಹಿಸಿದರು.

ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಪೊಲೀಸರು ಪ್ರತಿಭಟನಾಕಾರರನ್ನ ತಡೆದರು. ಈ ಸಂದರ್ಭದಲ್ಲಿ ಕೆಲಹೊತ್ತು ಪ್ರತಿಭಟನಾಕಾರರು ಮತ್ತು ಪೊಲೀಸರ ಮಾತಿಕ ಚಕಮಕಿ ನಡೆಯಿತು.