“ಅಪ್ಪು ಬಾಸ್ ರಿಯಲ್ ಬಾಸ್…ಅಪ್ಪು ಮಿಸ್ ಯೂ ಮ್ಯಾನ್..” ಹೀಗೆ ಕನ್ನಡಿಗರ ಪ್ರೀತಿಯ ಅಪ್ಪು ಅಂದರೆ ದಿವಂಗತ ಪುನೀತ್ ರಾಜ್ಕುಮಾರ್ ಅವರನ್ನು ಸ್ಮರಿಸಿರುವುದು ಕ್ರಿಕೆಟಿಗ ಕ್ರಿಸ್ಗೇಲ್.
ಅಂತರರಾಷ್ಟ್ರೀಯ ಕ್ರಿಕೆಟ್ ಅನ್ನು ಹಲವು ವರ್ಷಗಳ ಕಾಲ ಆಳಿ ಯೂನಿವರ್ಸ್ ಬಾಸ್ ಎನಿಸಿಕೊಂಡಿರುವ ಕ್ರಿಕೆಟಿಗ, ಪುನೀತ್ ರಾಜ್ಕುಮಾರ್ ಅವರನ್ನು ಬಾಸ್ ಎಂದು ಕರೆದಿರುವ ವಿಡಿಯೋವನ್ನು ಅಪ್ಪು ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಭಾವುಕರಾಗಿದ್ದಾರೆ.
ಇತ್ತೀಚೆಗೆ ಕ್ರಿಸ್ ಗೇಲ್ ಆರ್ಸಿಬಿ ಇನ್ಸೈಡರ್ ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ಸಂದರ್ಶನದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರನ್ನು ನೆನೆದಿದ್ದಾರೆ.
ಹೌದು, ಡ್ಯಾನಿಶ್ ಸೇಠ್ ಅವರು ನಡೆಸಿಕೊಡುವ ಸಂದರ್ಶನದಲ್ಲಿ ಭಾಗವಹಿಸಿರುವ ಆರ್ಸಿಬಿ ಮಾಜಿ ಆಟಗಾರ ಕ್ರಿಸ್ ಗೇಲ್, ಆರ್ಸಿಬಿ ಕುರಿತು ಹಾಗೂ ವಿಶೇಷವಾಗಿ ಕಲಬುರಗಿ ಊರಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೇಳೆ ತಮ್ಮ ಇಷ್ಟದ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದ ಕ್ರಿಸ್ ಗೇಲ್ ಅವರಿಗೆ ಮಿಸ್ಟರ್ ನ್ಯಾಗ್ಸ್, “ಕ್ರಿಸ್ ಗೇಲ್ ಅವರೇ ನೀವು ಕಲಬುರ್ಗಿಯಲ್ಲಿ ಯಾವುದಾದರೂ ಮ್ಯೂಸಿಕ್ ಪ್ಲೇ ಮಾಡ್ತೀರಾ?” ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಿರುವ ಕ್ರಿಸ್ ಗೇಲ್, “ಅಲ್ಲಿ ಕೇವಲ ಇಬ್ಬರು ಬಾಸ್ ಇದ್ದಾರೆ. ಯೂನಿವರ್ಸ್ ಬಾಸ್ ಹಾಗೂ ಅಪ್ಪು ಬಾಸ್.. ಅಪ್ಪು ಬಾಸ್ ರಿಯಲ್ ಬಾಸ್, ಅಷ್ಟೇ” ಎಂದು ಹೇಳಿದರು. ಹಾಗೆ ನಮಗಾಗಿ ಯಾವುದಾದರೂ ಹಾಡು ಹಾಡ್ತೀರ ಎಂದಾಗ ಕ್ರಿಸ್ ಗೇಲ್, ಪುನೀತ್ ರಾಜ್ಕುಮಾರ್ ನಟನೆಯ ‘ದೊಡ್ಮನೆ ಹುಡ್ಗ’ ಚಿತ್ರದ ‘ತ್ರಾಸ್ ಆಕ್ಕೇತಿ’ ಹಾಡನ್ನು ಹಾಡಿ ರಂಜಿಸಿದರು.
ಮುಂದುವರಿದು ಮಾತನಾಡಿದ ಕ್ರಿಸ್ ಗೇಲ್, “ಅಪ್ಪು ಮಿಸ್ ಯೂ.. ಮ್ಯಾನ್” ಎಂದು ಹೇಳಿ ಪುನೀತ್ ರಾಜ್ಕುಮಾರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದರು. ಅಲ್ಲದೇ “ಕಲಬುರ್ಗಿಯ ಜೋಳದ ರೊಟ್ಟಿ ಹಾಗೂ ಶೇಂಗಾ ಚಟ್ನಿ ಎಂದರೆ ನನಗೆ ಬಲು ಇಷ್ಟ” ಎಂದು ಕ್ರಿಸ್ ಗೇಲ್ ತಿಳಿಸಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ತಂಡ. ಹೀಗಾಗಿಯೇ ನಮ್ಮ ರಾಜ್ಯದ ತಂಡ ಎಂದು ಪ್ರತಿಯೊಬ್ಬ ಕನ್ನಡಿಗರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬೆಂಬಲವನ್ನು ದೊಡ್ಡಮಟ್ಟದಲ್ಲಿ ಸೂಚಿಸುತ್ತಾರೆ. ಇನ್ನು ಆರ್ಸಿಬಿ ಎಂದರೆ ಕೇವಲ ಸಾಮಾನ್ಯ ಜನರು ಮಾತ್ರವಲ್ಲದೇ ಕನ್ನಡ ಚಲನಚಿತ್ರ ರಂಗದ ಹಲವು ಸ್ಟಾರ್ ನಟರು, ನಟಿಯರು, ನಿರ್ದೇಶಕರು ಹಾಗೂ ಇತರೆ ಸಿನಿಮಾ ಕಲಾವಿದರು ಸಹ ಬೆಂಬಲ ನೀಡುತ್ತಾರೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಕನ್ನಡ ಚಿತ್ರರಂಗಕ್ಕೂ ಈ ಹಿಂದಿನಿಂದಲೂ ಒಂದು ರೀತಿಯ ಅವಿನಾಭಾವ ಸಂಬಂಧವಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭದ ದಿನಗಳಲ್ಲಿ ಇದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪ್ರಚಾರದ ಬ್ರಾಂಡ್ ಅಂಬಾಸಿಡರ್ ಆಗಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ಮೋಹಕ ತಾರೆ ರಮ್ಯಾ ಹಾಗೂ ದೀಪಿಕಾ ಪಡುಕೋಣೆ ಕಾರ್ಯ ನಿರ್ವಹಿಸಿದ್ದರು.