—– ತ್ಯಾಗಟೂರು ಸಿದ್ದೇಶ್ – ಹಿರಿಯ ಪತ್ರಕರ್ತರು—-
“ನಂದಿನಿ” ಅನ್ನೋ ಹೆಸರೇ ಒಂದು ಸ್ಪೂರ್ತಿ… ಅದರಲ್ಲೂ ಕರುನಾಡಿನ ಕೋಟ್ಯಂತರ ಜನತೆಯ ಮನೆ ಮನಗಳಲ್ಲಿ ನೆಲೆನಿಂತಿರೋ ಹೆಮ್ಮೆಯ ಹೆಸರು.
ಹೌದು “ನಂದಿನಿ” ಕನ್ನಡಿಗರ ಅಸ್ಮಿತೆ..ಕನ್ನಡಿಗರ ಸ್ವತ್ತು..ಕನ್ನಡಿಗರ ಜೀವನಾಡಿ..ಕನ್ನಡಿಗರ ಹೃದಯ ಮಿಡಿತ..!ಇಂಥಾ ನಮ್ಮ ಸ್ವಾಭಿಮಾನದ ಪ್ರತೀಕವಾದ “ನಂದಿನಿ”ಯ ಜಾಗದಲ್ಲಿ ಎಷ್ಟೇ ಅಮೂಲ್ಯವಾಗಿದ್ದರೂ ಇನ್ನೊಂದು ಹೆಸರನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಯಾಕಂದ್ರೆ ನಂದಿನಿಗೆ ಕರುನಾಡಿನ ಪ್ರತಿಕುಟಂಬದ ಜೊತೆಗೂ ಅದೊಂತರಾ ಭಾವನಾತ್ಮಕ ಸಂಬಂಧ ಬೆಸೆದುಕೊಂಡಿದೆ. ಪ್ರೀತಿಯಿದೆ,
ವಿಶ್ವಾಸವಿದೆ. ನಂಬಿಕೆಯಿದೆ… ಹೀಗಿರುವಾಗ ಅದ್ಯಾವ ಹುನ್ನಾರವೋ ಗೊತ್ತಿಲ್ಲ ಗುಜರಾತ್ ಮೂಲದ ಅಮೂಲ್ ನಂದಿನಿಯನ್ನು ಅಪೋಶನ ತೆಗೆದುಕೊಳ್ಳಲು ತೆರೆಮರೆಯಲ್ಲಿ ಪ್ರಯತ್ನ ಪಡುತ್ತಿದೆ ಅನ್ನೋ ಮಾತು ಕೇಳಿಬರುತ್ತಿದೆ. ಅದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ಕರ್ನಾಟಕಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಜರಾತಿನ ಅಮೂಲ್ ಹಾಗೂ ನಂದಿನಿ ವಿಲೀನ ಕುರಿತ ಹೇಳಿಕೆ ಸಾಕ್ಷಿಯಾಗಿತ್ತು.

ಇದು ಕನ್ನಡಿಗರಲ್ಲಿ ಆತಂಕವನ್ನು ತಂದಿತ್ತು. ಇದಷ್ಟೇ ಅಲ್ಲದೆ ಇದಕ್ಕೆ ಪುಷ್ಠಿ ನೀಡುವಂತೆ ನಂದಿನಿ ಹೆಸರಿನ ಕೆಳಗೆ “ದಹಿ” ‘ದೂದ್’ ಹೀಗೆ ಹಿಂದಿಯ ಹೆಸರು ಕಾಣಿಸುವ ಪ್ರಯತ್ನವೂ ಆಯಿತು. ಇದಲ್ಲದೆ ಬೇಸಿಗೆಯ ನೆಪದಲ್ಲಿ ನಂದಿನಿಯ ಕೃತಕ ಅಭಾವವನ್ನು ಸೃಷ್ಠಿಸಲಾಯಿತು.
ನಂದಿನಿಯ ಅಸ್ತಿತ್ವ ಕಳೆಯುವ ಪ್ರಯತ್ನ ಇದೇನು ಹೊಸದಲ್ಲ ಕಳೆದ ಕೆಲ ವರ್ಷಗಳಿಂದ ನೆರೆಯ ರಾಜ್ಯಗಳ ದೊಡ್ಲ, ಹೆರಿಟೇಜ್, ಆರೋಗ್ಯ ಸೇರಿದಂತೆ ಇನ್ನೂ ಹಲವರು ಬಣ್ಣ ಹಚ್ಚಿಕೊಂಡು ಬಂದ್ರೂ ಕನ್ನಡಿಗರ ಹೆಮ್ಮೆಯ “ನಂದಿನಿ’ಯ ಮುಂದೆ ಅವರ ಆಟ ನಡೆಯಲಿಲ್ಲ.
ಆದ್ರೆ ಈಗಿನ ಪರಿಸ್ಥಿತಿಯೇ ಬೇರೆ ಯಾಕಂದ್ರೆ “ನಂದಿನಿ” ಹೇಗೆ ಕನ್ನಡಿಗರ ಹೆಮ್ಮೆಯೋ ಅದೇ ರೀತಿ ಗುಜರಾತಿಗರ ಹೆಮ್ಮೆ “ಅಮೂಲ್”…
ಗುಣಮಟ್ಟ ಹಾಗು ಜನಪ್ರಿಯತೆಯಲ್ಲಿ ಇಬ್ಬರೂ ಸರಿಸಮಾನರು.

ನಂದಿನಿ ದಿನವೊಂದಕ್ಕೆ 75 ಲಕ್ಷ ಲೀಟರ್ ಹಾಲನ್ನು ಗ್ರಾಹಕರಿಗೆ ಪೂರೈಸಿ ವಾರ್ಷಿಕ 20,000 ಕೋಟಿ ವಹಿವಾಟು ನಡೆಸುತ್ತಿದ್ದರೆ… ಅಮೂಲ್ 2 ಕೋಟಿ 60 ಲಕ್ಷ ಲೀಟರ್ ಹಾಲು ಪೂರೈಸಿ ವಾರ್ಷಿಕ 75 ಸಾವಿರ ಕೋಟಿ ವಹಿವಾಟು ನಡೆಸುತ್ತೆ.
ಇದಷ್ಟೇ ಅಲ್ಲ, ಈ ಎರಡೂ ಬ್ರ್ಯಾಂಡ್ ಗಳಿಂದ ಕೋಟ್ಯಂತರ ರೈತಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಲಕ್ಷಾಂತರ ಮಂದಿಗೆ ಉದ್ಯೋಗ ದೊರಕುವಂತಾಗಿದೆ. ಹೀಗೆ ನಂದಿನಿ ಮತ್ತು ಅಮೂಲ್ ತನ್ನದೇ ಆದ ಸಾಮ್ರಾಜ್ಯ ವಿಸ್ತರಣೆ ಮಾಡಿಕೊಂಡು ಬಂದಿವೆ.
ಅದೇನೆ ಇರಲಿ ಎಲ್ಲ ಕ್ಷೇತ್ರಗಳಲ್ಲಿ ಇದ್ದಂತೆ ಇಲ್ಲಿಯೂ ಕೂಡ ಪೈಪೋಟಿ ಇದ್ದೇ ಇರುತ್ತೆ… ಆದ್ರೆ ಇಲ್ಲಿ ಆತಂಕವಿರೋದು ಗೃಹಸಚಿವ ಅಮಿತ್ ಶಾ ಅವರ ವಿಲೀನದ ಹೇಳಿಕೆ…ಯಾಕಂದ್ರೆ ನಮ್ಮೆಲ್ಲರ ಪ್ರೀತಿಯ ಸ್ಟೇಟ್ ಬ್ಯಾಂಕ್ ಮೈಸೂರು, ವಿಜಯಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ಹೀಗೆ ಜನರ ಪ್ರೀತಿ ವಿಶ್ವಾಸಗೊಳಿಸಿಕೊಂಡಿದ್ದ ಬ್ಯಾಂಕ್ ಗಳು ಇಂದು ಜನಮಾನಸದಲ್ಲಿ ಮರೆಯಾಗಿದ್ದು ಇತಿಹಾಸ.

ಹೀಗಿರುವಾಗ ನಂದಿನಿಗಿಂತ ಬಲಾಢ್ಯ ವಾಗಿರೋ ಅಮೂಲ್ ಆರ್ಭಟ ಹೆಚ್ಚಾದ್ರೆ ಕರ್ನಾಟಕದ ಕ್ಷೀರೋಧ್ಯಮ ಕುಂಟಿತಗೊಂಡು ಅದನ್ನೆ ನಂಬಿ ಬದುಕುತ್ತಿರೋ ಲಕ್ಷಾಂತರ ಕುಟುಂಬಗಳ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತೆ ಅನ್ನೋ ಆತಂಕವಂತೂ ಖಃಡಿತಾ ಇದ್ದೇ ಇದೆ. ಇನ್ನು ಈ ವಿಷಯವನ್ನು ರಾಜಕೀಯ ಪಕ್ಷಗಳು ಭಾವನಾತ್ಮಕವಾಗಿ ಜನರ ಮನಸ್ಸಿನಲ್ಲಿ ತುಂಬಿ ಲಾಭಮಾಡಿಕೊಳ್ಳೋ ಹುನ್ನಾರವೂ ಇರುತ್ತೆ!
ಅದೇನೆ ಇರಲಿ ಎಪ್ಪತ್ತು ಸಾವಿರ ಕೋಟಿಯ ಗುಜರಾತಿನ ಅಮೂಲ್ ಇಪ್ಪತ್ತು ಸಾವಿರ ಕೋಟಿಯ ನಂದಿನಿಯನ್ನು ನುಂಗಿಬಿಡುತ್ತಾ ಅನ್ನೋ ಆತಂಕದ ನಡುವೆಯೂ ಕನ್ನಡಿಗರಾದ ನಾವು ತೆಗೆದುಕೊಳ್ಳೊ ಒಂದು ದಿಟ್ಟ ನಿರ್ಧಾರ ಜಗತ್ತಿನ ಯಾವ ಭಾಗದಿಂದ ಅದ್ಯಾವ ರೂಪವೆತ್ತಿ ಬಂದರೂ ನಮ್ಮೆಲ್ಲರ ಅಸ್ಮಿತೆ ನಂದಿನಿಯ ಹತ್ತಿರವೂ ಸುಳಿಯದಂತೆ ಮಾಡಬಹುದು.

ಅದೇನಂದ್ರೆ “ನಂದಿನಿ”ಯೇ ನಮ್ಮೆಲ್ಲರ ಪ್ರತಿ ಮುಂಜಾನೆಯ ಸ್ಪೂರ್ತಿಯಾಗಬೇಕು..! ‘ನಂದಿನಿ’ ಎಂಬ ಕಾಮಧೇನುವಿನ ಕೆಚ್ಚಲು ಕೊಯ್ಯುವ ರಾಜಕೀಯಕ್ಕೆ ಧಿಕ್ಕಾರ ಹೇಳಬೇಕು..!
ನಮ್ಮ ಮನೆ ಮನೆಯ ಮಕ್ಕಳ ತುಟಿಯೊಳು ತೊಟ್ಟು ಇಟ್ಟು ಅಮೃತ ಕರೆಯುವ ‘ನಂದಿನಿ’ ಎಂಬ ಆ ತಾಯಿ ಪ್ರತಿ ಮನೆಯ ಮಕ್ಕಳಂತೆಯೇ ಬೆಳೆಯಲಿ ಎಂಬುದು ನಮ್ಮೆಲ್ಲರ ಧ್ಯೇಯವಾಗಬೇಕು…!