ಮ್ಯೂಸಿಕ್ ಮಾಂತ್ರಿಕ.. ಭಾರತದ ಜನಪ್ರಿಯ ರ‍್ಯಾಪರ್.. ನಿರ್ದೇಶಕ ಯೋಯೋ ಹನಿಸಿಂಗ್ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಮಾಲೀಕರೊಬ್ಬರು ಠಾಣೆ ಮೆಟ್ಟಿಲೇರಿದ್ದಾರೆ.
ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ಮಾಲೀಕ ವಿವೇಕ್ ರಮನ್ ಎಂಬುವವರು, ನಿರ್ದೇಶಕ ಹನಿ ಸಿಂಗ್, ಅಪಹರಿಸಿ, ಹಲ್ಲೆ ನಡೆಸಿದ್ದಾರೆ ಎಂದು ಠಾಣೆ ಮೆಟ್ಟಿಲೇರಿದ್ದಾರೆ. ಹನಿ ಸಿಂಗ್ ಹಾಗೂ ಆತನ ಸಹಚರರು ನನ್ನನ್ನು ಅಪಹರಣ ಮಾಡಿ, ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಅಷ್ಟೇ ಅಲ್ಲದೇ, ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಅಸಭ್ಯವಾಗಿ ಬೈದಿದ್ದಾರೆ, ಜೀವಬೆದರಿಕೆ ಹಾಕಿದ್ದಾರೆ ಎಂದು ಮುಂಬೈನ ಬಿಕೆಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ದೂರಿನಲ್ಲಿ ಉಲ್ಲೇಖಿಸಿರುವ ಮಾಲೀಕ ವಿವೇಕ್,
ಹನಿ ಸಿಂಗ್ ಏಪ್ರಿಲ್ ಒಂದನೇ ತಾರೀಖಿನಂದು ತಮ್ಮ ಹೊಸ ಆಲ್ಬಂ ಹನಿ ಸಿಂಗ್ 3.0ನ ಹಾಡೊಂದನ್ನು ಲೈವ್ ಆಗಿ ಬಿಡುಗಡೆ ಮಾಡಿದ್ದರು. ಏಪ್ರಿಲ್ 15 ಕ್ಕೆ ಎರಡನೇ ಹಾಡು ಬಿಡುಗಡೆಗೆ ಮಾಡೋದಾಗಿ ಕಾರ್ಯಕ್ರಮದಲ್ಲಿ ಪ್ರಚಾರ ಮಾಡಿದ್ದರು. ಹಣಕಾಸು ವ್ಯವಹಾರದಲ್ಲಿ ನಡೆದ ಗೊಂದಲದಿಂದಾಗಿ ವಿವೇಕ್, ಹನಿಸಿಂಗ್ ಶೋ ಅನ್ನು ಕ್ಯಾನ್ಸಲ್ ಮಾಡಿದ್ದು, ಇದರಿಂದ ಸಿಟ್ಟಿಗೆದ್ದ ಹನಿ ಸಿಂಗ್ ಹಾಗೂ ಆತನ ಕಡೆಯವರು ತಮ್ಮನ್ನು ಅಪಹರಿಸಿ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
“ದೂರು ನೀಡಿದ ವ್ಯಕ್ತಿ ಯಾರೆಂದೇ ಗೊತ್ತಿಲ್ಲ. ಮಾನನಷ್ಟ ಮೊಕದ್ದಮೆ ದಾಖಲಿಸ್ತೀನಿ”
ಇನ್ನು ತಮ್ಮ ವಿರುದ್ಧ ದೂರು ದಾಖಲಾದ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಸ್ಪಷ್ಟನೆ ನೀಡಿದ ಅವರು, ನನ್ನ ವಿರುದ್ಧ ಮಾಡಲಾಗುತ್ತಿರುವ ಆರೋಪ ಸುಳ್ಳು, ನನ್ನ ಸಂಸ್ಥೆ ಹಾಗೂ ನನ್ನ ವಿರುದ್ಧ ದೂರು ನೀಡಿರುವ ಸಂಸ್ಥೆಯ ಜೊತೆಗೆ ನನಗೆ ಯಾವುದೇ ಒಪ್ಪಂದ ಆಗಿಯೇ ಇಲ್ಲ. ಮುಂಬೈನಲ್ಲಿ ನಡೆಯಬೇಕಿರುವ ನನ್ನ ಶೋಗೆ ನಾನು ಟ್ರೈಬಿವೈ ಹೆಸರಿನ ಸಂಸ್ಥೆಯೊಟ್ಟಿಗೆ ಒಪ್ಪಂದ ಮಾಡಿಕೊಂಡಿದ್ದೇನೆ. ಆ ಸಂಸ್ಥೆಯು ಬಹಳ ಘನತೆಯುಳ್ಳ ಸಂಸ್ಥೆ. ನಾನು ನನ್ನ ಪ್ರದರ್ಶನವನ್ನು ನಿಯಮಕ್ಕೆ ಸರಿಯಾಗಿ ಮಾಡಿದ್ದೇನೆ. ಈಗ ದೂರು ನೀಡಿರುವ ಸಂಸ್ಥೆ ಯಾವುದೆಂದು ನನಗೆ ಗೊತ್ತಿಲ್ಲ. ಆ ವ್ಯಕ್ತಿಯೂ ಗೊತ್ತಿಲ್ಲ. ನನ್ನ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ಆಧಾರರಹಿತ. ನನ್ನ ಹೆಸರಿಗೆ ಕಪ್ಪು ಮಸಿ ಬಳೆಯಲು ಹೀಗೆ ಮಾಡಿದ್ದು, ಮಾನನಷ್ಟ ಮೊಕದ್ದಮೆ ದಾಖಲಿಸೋದಾಗಿ ತಿಳಿಸಿದರು.