ನಟ, ನಿರ್ದೇಶಕ ನರೇಶ್-ಪವಿತ್ರಾ ಲೋಕೇಶ್ ನಟನೆಯ ತೆಲುಗಿನ ''ಮಳ್ಳಿ ಪೆಳ್ಳಿ' ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ. ನರೇಶ್ ಹಾಗು ನಟಿ ಪವಿತ್ರಾ ಲೋಕೇಶ್ ಅವರ ಸಂಬಂಧವನ್ನು ತೆರೆದಿಡುವ ಈ ಸಿನಿಮಾ ಮೇ ತಿಂಗಳಲ್ಲಿ ತೆರೆ ಕಾಣಲಿದೆ ಎಂದು ಹೇಳಲಾಗುತ್ತಿದೆ.

ಸದ್ಯ ಟೀಸರ್ ನಲ್ಲಿ ಏನಿದೆ?
“ತೆಲುಗು ಇಂಡಸ್ಟ್ರಿಯವರು ಕನ್ನಡದ ಮೇಲೆ ಕಣ್ಣಾಕ್ತಿದ್ದಾರಲ್ಲ” ಅನ್ನುವ ಡೈಲಾಗ್ ಮೂಲಕ ಟೀಸರ್ ಶುರುವಾಗುತ್ತದೆ. ನಂತರ ಮಾಧ್ಯಮಗಳ ಮುಂದೆ ತಮ್ಮ ಮೂರನೇ ಪತ್ನಿ ಆರೋಪ ಮಾಡುತ್ತಿರುವುದನ್ನು ಚಿತ್ರಿಸಲಾಗಿದೆ. ಟೀಸರ್ ನಲ್ಲಿ ನರೇಶ್- ರಮ್ಯಾ ರಘುಪತಿ ಅವರ ನಡುವಿನ ಜಗಳ, ಪವಿತ್ರಾ ಲೊಕೇಶ್ ಅವರೊಂದಿಗಿನ ಸ್ನೇಹ, ಪ್ರೀತಿ, ಸಂಬಂಧದ ನಂತರ ಮದುವೆಯನ್ನು ತೋರಿಸಲಾಗಿದೆ. ಹಾಗೆ ನರೇಶ್- ಪವಿತ್ರಾ ಲೋಕೇಶ್ ಅವರಿಬ್ಬರ ಲಿಪ್ ಲಾಕ್ ದೃಶ್ಯ ನೋಡುಗರ ಹುಬ್ಬೇರಿಸುವಂತಿದೆ.

ಈ ಹಿಂದೆ ತಮ್ಮ 3ನೇ ಪತ್ನಿ ರಮ್ಯಾ ರಘುಪತಿ ಎದುರು ಮೈಸೂರಿನ ಹೋಟೆಲ್ ನಲ್ಲಿ ನಡೆದ ರಂಪಾಟ ದೃಶ್ಯವನ್ನೂ ಸೆರೆ ಹಿಡಿಯಲಾಗಿದೆ. ಚಿತ್ರದಲ್ಲಿ ರಮ್ಯಾ ರಘುಪತಿ ಪಾತ್ರವನ್ನು ಕೂಡ ಸೃಷ್ಟಿಸಲಾಗಿದೆ. ನಟಿ ವಿನಿತಾ ವಿಜಯ್‌ಕುಮಾರ್ ಆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಕೆ ಮಾಧ್ಯಮಗಳ ಮುಂದೆ ಪತಿಯ ಬಗ್ಗೆ ಮಾಡುವ ಆರೋಪಗಳನ್ನು ಟೀಸರ್‌ನಲ್ಲಿ ಹೈಲೆಟ್ ಮಾಡಿ ತೋರಿಸಲಾಗಿದ್ದು, ನೋಡುಗರಲ್ಲಿ ಕುತೂಹಲ ಮೂಡಿಸಿದೆ.
ತಮ್ಮ ನಿಜ ಜೀವನದ ಕಥೆಯಲ್ಲಿ ನರೇಶ್- ಪವಿತ್ರಾ ತಾವೇ ನಟಿಸಿರುವುದರಿಂದ ಇದು ನಿಜ ಜೀವನದ ಕಥೆ ಅಂತಲೇ ನೋಡುಗರಿಗೆ ಭಾಸವಾಗುತ್ತದೆ.
‘ಇದು ಬರೀ ಸಿನಿಮಾ ಅಲ್ಲ, ನರೇಶ್ ಬಯೋಪಿಕ್’.

ನರೇಶ್ ಹಾಗೂ ಪವಿತ್ರಾ ಲೋಕೇಶ್ ಲಿವ್‌ಇನ್ ರಿಲೇಷನ್‌ಶಿಪ್ ಸಂಬಂಧಕ್ಕೆ ಪುಷ್ಠಿ ನೀಡಿದೆ ಎಂದು ಟೀಸರ್ ನೋಡಿದವರು ಹೇಳುತ್ತಿದ್ದಾರೆ.
ಒಟ್ಟಾರೆ ತಮ್ಮ ಕೌಟುಂಬಿಕ ವಿವಾದ, ಪವಿತ್ರಾ ಲೋಕೇಶ್ ಅವರೊಂದಿಗಿನ ಸಂಬಂಧ ಎಲ್ಲವನ್ನು ಈ ಸಿನಿಮಾದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ನರೇಶ್.
ಅಂತಿಮವಾಗಿ ನರೇಶ್ ಈ ಸಿನಿಮಾ ಮೂಲಕ ತಮ್ಮ ಮೇಲಿನ ಆರೋಪಗಳಿಗೆ ಉತ್ತರ ಕೊಡಲು ಸಹ ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.

ನರೇಶ್ ಹಾಗೂ ಪವಿತ್ರಾ ಪ್ರೇಮಿಗಳಾ? ಅಥವಾ ಆತ್ಮೀಯ ಸ್ನೇಹಿತರಾ? ಈ ಪ್ರಶ್ನೆಗೆ ‘ಮಳ್ಳಿ ಪೆಳ್ಳಿ’ ಸಿನಿಮಾ ಉತ್ತರ ನೀಡಲಿದೆ. ತಾವು ಚಿತ್ರರಂಗಕ್ಕೆ ಬಂದು 50 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ನರೇಶ್ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ತಮ್ಮದೇ ಬ್ಯಾನರ್ ಅಡಿಯಲ್ಲಿ ತಮ್ಮಿಬ್ಬರ ನಿಜ ಜೀವನದ ಕತೆಯನ್ನೇ ಸಿನಿಮಾ ರೂಪಕ್ಕಿಳಿಸಿದ್ದಾರೆ ನರೇಶ್. ಎಂ. ಎಸ್ ರಾಜು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಸಿನಿಮಾ ಕನ್ನಡದಲ್ಲಿ ‘ ಮತ್ತೆ ಮದುವೆ’ಯಾಗಿ ತೆರೆಗೆ ಬರಲಿದೆ.
ತಾರಾಗಣದಲ್ಲಿ ಜಯಸುಧಾ, ಶರತ್ ಬಾಬು, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ ಹಾಗೂ ಮಧು ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ.
ಸುರೇಶ್ ಬೊಬ್ಬಿಲಿ ಸಂಗೀತ ನಿರ್ದೇಶನ, ಅರುಲ್ ದೇವ್ ಹಿನ್ನೆಲೆ ಸಂಗೀತ, ಎಂ.ಎನ್ ಬಾಲ್ ರೆಡ್ಡಿ ಕ್ಯಾಮೆರಾ, ಅನಂತ ಶ್ರೀರಾಮ್ ಸಾಹಿತ್ಯ ‘ಮಳ್ಳಿ ಪೆಳ್ಳಿ’ ಚಿತ್ರಕ್ಕಿದೆ.