ಚಿಕ್ಕಮಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು ಹಾಗೂ ಸಿಎಂ ಸ್ಥಾನ ಲಭಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶೃಂಗೇರಿ ಶಾರದಾಂಬೆಯ ಮೊರೆ ಹೋಗಿದ್ದಾರೆ.
ಶನಿವಾರ ಶೃಂಗೇರಿ ಶಾರದಾಂಬೆ ದೇವಾಲಯಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ ಅವರು, ಸನ್ನಿಧಿಯಲ್ಲಿ ಪತ್ನಿಯೊಂದಿಗೆ ಸಂಕಲ್ಪ ಮಾಡಿದರು.

ಬೆಳಗ್ಗೆ ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಸಂಜೆ ಶಾರದಾಂಬೆ ಸನ್ನಿಧಿಯಲ್ಲಿ ಚಂಡಿಕಾ ಯಾಗದ ಸಂಕಲ್ಪ ಕೈಗೊಂಡಿದ್ದಾರೆ. ಅವರ ಆಪ್ತ ಖ್ಯಾತ ಜ್ಯೋತಿಷಿ ದ್ವಾರಕನಾಥ್ ನೇತೃತ್ವದಲ್ಲಿ ಭಾನುವಾರ ಶಾರದಾಂಬೆಯ ಸನ್ನಿಧಿಯಲ್ಲಿ ನಡೆಯಲಿರುವ ಚಂಡಿಕಾಯಾಗ ಬೆಳಗ್ಗೆ 9 ಗಂಟೆಗೆ ಆರಂಭವಾಗಿ 12 ಗಂಟೆಗೆ ಪೂರ್ಣಾಹುತಿಯಾಗಲಿದೆ. ಸುಮಾರು ಹತ್ತಕ್ಕೂ ಹೆಚ್ಚು ಋತ್ವಿಜರು ಹಾಗೂ ಪುರೋಹಿತರನ್ನು ಒಳಗೊಂಡ ತಂಡ ಶ್ರೀ ಕ್ಷೇತ್ರದಲ್ಲಿ ಚಂಡಿಕಾಯಾಗ ಕೈಗೊಳ್ಳಲಿದ್ದಾರೆ. ಶನಿವಾರ ಸಂಜೆಯೇ ಯಾಗಕ್ಕೆ ಸಂಕಲ್ಪ ಮಾಡಿರೋ ಡಿಕೆಶಿ ದಂಪತಿ ಇಂದು ಮಧ್ಯಾಹ್ನದವರೆಗೂ ಶೃಂಗೇರಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಚುನಾವಣಾ ಪ್ರಚಾರಕ್ಕೂ ಮುನ್ನ ಡಿಕೆಶಿ ಪತ್ನಿಯೊಂದಿಗೆ ಹೋಮ-ಹವನದಲ್ಲಿ ತೊಡಗಿಕೊಂಡಿದ್ದಾರೆ.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ವಿಘ್ನಗಳನ್ನು ನಿವಾರಣೆ ಮಾಡುವಂತೆ ದೇವರ ಬಳಿ ಬಂದಿದ್ದೇನೆ. ನನ್ನ ಚುನಾವಣಾ ಪ್ರಚಾರ ಈ ಕ್ಷೇತ್ರದಿಂದಲೇ ಆರಂಭವಾಗಲಿದೆ ಎಂದರು. ಈ ಕ್ಷೇತ್ರದಲ್ಲಿ ಯಾರು ಏನು ಬೇಕಾದರೂ ಪ್ರಾರ್ಥನೆ ಮಾಡಿಕೊಳ್ಳಬಹುದು. ರಾಜೀವ್ ಗಾಂಧಿ ಕೂಡ ಇಲ್ಲಿ ದೊಡ್ಡ ಹೋಮ-ಯಾಗ ನಡೆಸಿದ ಇತಿಹಾಸವಿದೆ ಎಂದರು.
ಕನಕಪುರದಲ್ಲಿ ನಾನು ಅಭ್ಯರ್ಥಿಯೇ ಅಲ್ಲ. ಪ್ರತಿ ಮನೆಯಲ್ಲೂ ಡಿ.ಕೆ.ಶಿವಕುಮಾರ್ ಇದ್ದಾನೆ. ಅವರೇ ಅಭ್ಯರ್ಥಿಗಳು. ಅವರೇ ಚುನಾವಣೆ ಮಾಡಿಕೊಳ್ಳುತ್ತಾರೆ. ಸದ್ಯ ನಾನು ನಾಮಪತ್ರವನ್ನ ಸಲ್ಲಿಸಿದ್ದೇನೆ ಅಷ್ಟೇ. ಉಳಿದಿದ್ದೆಲ್ಲವನ್ನೂ ಅವರೇ ಮಾಡುತ್ತಾರೆ ಎಂದು ತಮ್ಮ ಕ್ಷೇತ್ರದ ಜನತೆಯ ಮೇಲೆ ವಿಶ್ವಾಸ ವ್ಯಕ್ತಪಡಿಸಿದರು.