‘ಪುಷ್ಪ 2’ ನಲ್ಲಿ ಖಡಕ್ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರಂತೆ ತೆಲುಗು ಸ್ಟಾರ್ ನಟ ಜಗಪತಿ ಬಾಬು!
ಹೌದು, ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ‘ಪುಷ್ಪ ೨’ ನಲ್ಲಿ ಹೊಸದಾಗಿ ಸ್ಟಾರ್ ಕಲಾವಿದರು ಎಂಟ್ರಿ ನೀಡಲಿರುವ ಸುದ್ದಿ ಎಲ್ಲೆಡೆ ಚರ್ಚೆಯಾಗುತ್ತಿದೆ.
ಈಗಾಗಲೇ ಹಲವು ಸಿನಿಮಾಗಳಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಿರುವ ನಟ ಜಗಪತಿ ಬಾಬು, ಇದೀಗ ‘ಪುಷ್ಪ ೨’ ನಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.
೨೦೨೧ರ ಡಿಸೆಂಬರ್ ನಲ್ಲಿ ತೆರೆ ಕಂಡಂತಹ ‘ಪುಷ್ಪ’ ಸಿನಿಮಾ ಟಾಲಿವುಡ್ ಸೇರಿದಂತೆ ಇಡೀ ಪ್ಯಾನ್ ಇಂಡಿಯಾದಲ್ಲಿ ಸೂಪರ್ ಹಿಟ್ ಆಗಿತ್ತು. ವರ್ಲ್ಡ್ ವೈಡ್ ಬರೋಬ್ಬರಿ ೩೦೦ ರಿಂದ ೪೫೦ ಕೋಟಿ ರೂ. ಗಳಿಕೆ ಕಂಡಿತ್ತು. ಈ ಚಿತ್ರ ಹಿಂದಿ ಭಾಷೆಯಲ್ಲೇ ೧೦೦ ಕೋಟಿ ಬಾಚಿಕೊಂಡು ಬಾಲಿವುಡ್ ಮಂದಿ ಹುಬ್ಬೇರಿಸುವಂತೆ ಮಾಡಿತ್ತು.

ಇದೀಗ ‘ಪುಷ್ಪ ೨’ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು, ಪುಷ್ಪರಾಜ್ ಹಾಗು ಎದುರಾಳಿ ಜೊತೆಗಿನ ಅಬ್ಬರವನ್ನು ಕಣ್ತುಂಬಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.
‘ಪುಷ್ಪ೨’ ನಲ್ಲಿ ಹಳೆಯ ತಂಡದೊಂದಿಗೆ ಹಲವು ಸ್ಟಾರ್ ಕಲಾವಿದರು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ನಟರಾದ ಸುನೀಲ್, ಡಾಲಿ ಧನಂಜಯ್, ಅನುಸೂಯ ಭಾರದ್ವಜ್ ಜತೆಗೆ ಇನ್ನಷ್ಟು ಕಲಾವಿದರು ನಟಿಸಲಿದ್ದಾರೆ ಎಂಬ ಮಾಹಿತಿ ಇದೆ.
ಪುಷ್ಪ ಭಾಗ ೨ ರಲ್ಲಿ ಯಾರ್ಯಾರು ಹೊಸದಾಗಿ ಎಂಟ್ರಿ ನೀಡಲಿದ್ದಾರೆ ಎಂಬ ಬಗ್ಗೆ ಅಧಿಕೃತವಾಗಿ ಚಿತ್ರತಂಡ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಆದರೀಗ ಟಾಲಿವುಡ್ ಸ್ಟಾರ್ ನಟ ಜಗಪತಿ ಬಾಬು ಪುಷ್ಪರಾಜ್ ಎದುರು ಅಬ್ಬರಿಸುವ ಸದ್ದು ಕೇಳಿಬಂದಿದೆ.
“ಪುಷ್ಪ ೧ ಸಿನಿಮಾ ತುಂಬಾ ಇಷ್ಟವಾಗಿತ್ತು. ಸುಕುಮಾರ್ ಜೊತೆಗೆ ಕೆಲಸ ಮಾಡುವುದಕ್ಕೆ ಸದಾ ಉತ್ಸುಕನಾಗಿರುತ್ತೇನೆ. ಈ ಹಿಂದಿನ ಚಿತ್ರಗಳಲ್ಲಿ ಮಾಡಿದ ಪಾತ್ರಕ್ಕಿಂತ ಪುಷ್ಪ ೨ ಸಿನಿಮಾದಲ್ಲಿನ ಪಾತ್ರ ತುಂಬಾ ಚಾಲೆಂಜಿಂಗ್ ಎನಿಸುವಂತಿದೆ” ಎಂದು ನಟ ಜಗಪತಿ ಬಾಬು ಸಂದರ್ಶನವೊಂದರಲ್ಲಿ ತಮ್ಮ ಪಾತ್ರದ ಬಗ್ಗೆ ಉಲ್ಲೇಖಿಸಿ ಪುಷ್ಪ ೨ ಚಿತ್ರದಲ್ಲಿ ನಟಿಸುತ್ತಿರುವುದನ್ನು ಖಚಿತಪಡಿಸಿದ್ದಾರೆ.