ಖಾಸಗಿ ವೀಡಿಯೋ ಲೀಕ್ ಮಾಡುತ್ತೇನೆಂದು ಸ್ಯಾಂಡಲ್ ವುಡ್ ನಟ ಸುದೀಪ್ ಗೆ ಬೆದರಿಕೆ ಪತ್ರ ಕಳಿಸಿದ್ದ ದುಷ್ಕರ್ಮಿಗಳ ಚಹರೆ ಪತ್ತೆಯಾಗಿದೆ.
ನಟ ಸುದೀಪ್ ರ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ
ದೂರು ದಾಖಲಾಗಿತ್ತು. ಅಪರಿಚಿತರು ನಟ ಸುದೀಪ್ ರನ್ನು ಉದ್ದೇಶಿಸಿ ಪತ್ರ ಬರೆದಿದ್ದು, ಖಾಸಗಿ ವಿಡಿಯೋವನ್ನು ವೈರಲ್ ಮಾಡೋದಾಗಿ ಪತ್ರದಲ್ಲಿ ಧಮ್ಕಿ ಹಾಕಿದ್ದರು.
ಅಲ್ಲದೆ ಪತ್ರದಲ್ಲಿ ನಟ ಸುದೀಪ್‌ಗೆ ಅವಾಚ್ಯ ಶಬ್ದಗಳಲ್ಲಿ ಬೈದು, ನಿಜ ಮುಖ ಬಯಲು ಮಾಡೋದಾಗಿ ಪತ್ರ ಬರೆದಿದ್ದಾರೆ. ಈ ಪತ್ರ ಮ್ಯಾನೇಜರ್ ಜಾಕ್ ಮಂಜುಗೆ ಸಿಕ್ಕಿದ್ದ ಬೆನ್ನಲ್ಲೇ ಠಾಣೆಗೆ ತೆರಳಿ ದೂರು ನೀಡಿದ್ದರು.
ಜಾಕ್ ಮಂಜು ನೀಡಿದ ದೂರನ್ನು ಆಧರಿಸಿ ಪುಟ್ಟೇನಹಳ್ಳಿ ಪೊಲೀಸರು ಐಪಿಸಿ 504, 506 ಹಾಗೂ ಐಟಿ ಆಕ್ಟ್ ಅಡಿಯಲ್ಲಿ ಕೇಸ್ ದಾಖಲಿಸಿದ್ದು, ಬೆದರಿಕೆ ಪತ್ರದ ಮೂಲ ಹುಡುಕಾಟದಲ್ಲಿದ್ದ ಸಿಸಿಬಿ ಪೊಲೀಸರಿಗೆ ಕೊನೆಗೂ ದುಷ್ಕರ್ಮಿಗಳ ಸುಳಿವು ಸಿಕ್ಕಿದೆ.
ನಟನ ಆಪ್ತರಿಂದ ಕೇಸ್ ದಾಖಲಾಗಿ 21 ದಿನ ಕಳೆಯುತ್ತಿದ್ದಂತೆ ಸಿಸಿಬಿ ಪೊಲೀಸರು ಕಾರ್ ನಂಬರ್, ಆರೋಪಿಗಳ ಚಹರೆ ಪತ್ತೆ ಹಚ್ಚಿದ್ದಾರೆ. ದೊಮ್ಮಲೂರು ಬಳಿಯ ಪೋಸ್ಟ್ ಬಾಕ್ಸ್ ಮೂಲಕ ನಟ ಸುದೀಪ್ ನಿವಾಸಕ್ಕೆ ಪೋಸ್ಟ್ ಮಾಡಿದ್ದರ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೇ, ಇಬ್ಬರು ವ್ಯಕ್ತಿಗಳ ಚಹರೆ ಪತ್ತೆ ಹಚ್ಚಿದ್ದಾರೆ. ವೈಟ್ ಕಲರ್ ಸ್ವಿಪ್ಟ್ ಮೂಲಕ ಬಂದ ಇಬ್ಬರು ವ್ಯಕ್ತಿಗಳು ದೊಮ್ಮಲೂರಲ್ಲಿ ಪೋಸ್ಟ್ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ. ಸಿಸಿಬಿ ತನಿಖೆ ಪ್ರಗತಿಯಲ್ಲಿದೆ. ತನಿಖೆ ವೇಳೆ ಮಹತ್ವದ ಸುಳಿವು ಸಿಕ್ಕಿದೆ. ಇನ್ನೂ ತನಿಖೆ ನಡೆಯುತ್ತಿದ್ದು, ತನಿಖೆ ಮುಗಿದ ಬಳಿಕ ಮಾಹಿತಿ ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ನಟ ಸುದೀಪ್ ಮನೆಯಲ್ಲಿ ಕೆಲಸ ಮಾಡ್ತಿದ್ದ ಕಾರ್ ಚಾಲಕನೊಬ್ಬ ಗಲಾಟೆ ಮಾಡಿ ಕೆಲಸ ಬಿಟ್ಟಿದ್ದ. ಹೀಗಾಗಿ ಜಾಕ್ ಮಂಜು ಆತನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಕಾರ್ ಚಾಲಕನನ್ನು ವಿಚಾರಣೆ ನಡೆಸಿದ ಪೊಲೀಸರಿಗೆ ಯಾವುದೇ ಟೆಕ್ನಿಕಲ್ ಎವಿಡೆನ್ಸ್ ಸಿಕ್ಕಿಲ್ಲ. ಇದೀಗ ಪೋಸ್ಟ್ ಮಾಡಿದವರ ಚಹರೆ ಅಸ್ಪಷ್ಟವಾಗಿ ಸಿಕ್ಕಿದ್ದು, ತನಿಖೆಗೆ ಚುರುಕುಗೊಂಡಿದೆ.