ಹುಬ್ಬಳ್ಳಿ : ಬಿಜೆಪಿಯಲ್ಲಿ ಹಿರಿಯ ನಾಯಕರನ್ನು ಮುಗಿಸುವ ತಂತ್ರ ಇಂದಿಗೂ ಮುಂದುವರಿದಿದೆ ಎಂದು ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನ ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪರ ಅವರನ್ನು ಸಿಎಮ್ ಆಗಿ ಎರಡು ವರ್ಷದಲ್ಲಿ ಕೆಳಗೆ ಇಳಿಸಿದ್ರು?, ಯಡಿಯೂರಪ್ಪರನ್ನು ಯಾಕೆ ಸಿಎಂ ಸ್ಥಾನದಿಂದ ಇಳಿಸಿದ್ರಿ? ವಯಸ್ಸಾಗಿದ್ರೆ ಈಗೇಕೆ ಅವರನ್ನು ಚುನಾವಣೆಗೆ ಬಳಸಿಕೊಳ್ಳುತ್ತಿದ್ದೀರಿ? ಎಂದು ಬಿಜೆಪಿ ಮುಖಂಡರನ್ನು ಪ್ರಶ್ನಿಸಿದರು.
ಯಡಿಯೂರಪ್ಪ ಅವರಿಗೆ ಎಲ್ಲಾ ಕಡೆ ಪ್ರವಾಸ ಮಾಡಲು ಹೇಳಿದ್ದೀರಿ, ಇದೇ ಬಿ.ಎಲ್. ಸಂತೋಷ್ ಅವರು ಯಡಿಯೂರಪ್ಪ ವಿರುದ್ಧ ಧ್ವನಿ ಎತ್ತಿದ್ರು, ಈಶ್ವರಪ್ಪ ರಾಜಿನಾಮೆ ತೆಗೆದುಕೊಂಡು ಮನೆಗೆ ಕಳಿಸಿದ್ರು, ಸಂತೋಷ್ ಅವರ ಹೇಳಿಕೆ ಎಲ್ಲೆಡೆ ವೈರಲ್ ಆಗುತ್ತಿದೆ, ಲಿಂಗಾಯತರಿಲ್ಲದೆ ಪಕ್ಷ ಕಟ್ಟಬೇಕು ಅನ್ನೋ ವಿಚಾರ ಸ್ಪ್ರೆಡ್ ಆಗುತ್ತಿದೆ ಇದಕ್ಕೆ ಸಂತೋಷ್ ಯಾಕೆ ಉತ್ತರಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಈಗ ಅದನ್ನು ಫೇಕ್ ಅಂತಾ ಬಿಂಬಿಸಲಾಗುತ್ತಿದೆ, ನಿಮ್ಮದೆ ಸರ್ಕಾರವಿದೆ, ಕೂಡಲೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬಹುದಲ್ಲಾ ಎಂದು ಪ್ರಶ್ನಿಸಿದ ಅವರು, ತಮಗೆ ಅನಾನುಕೂಲ ಆಗುವುದನ್ನು ಫೇಕ್ ಅಂತಾರೆ, ಈ ಹಿಂದೆ ನಳಿನ್‌ಕುಮಾರ್ ಕಟೀಲ್ ಆಡಿಯೋ ವೈರಲ್ ಆಗಿತ್ತು, ವೈರಲ್ ಆದ ತಕ್ಷಣ ಅದು ನನ್ನದಲ್ಲಾ ಫೇಕ್ ಆಡಿಯೋ ಅಂದ್ರು, ಆದರೆ, ಇದುವರೆಗೂ ಆಡಿಯೋ ತನಿಖೆ ಆಗಿ ಸತ್ಯಾಸತ್ಯತೆ ಬಯಲಿಗೆ ಯಾಕೆ ಬಂದಿಲ್ಲ ಎಂದು ಕಿಡಿಕಾರಿದರು.
ಪಕ್ಷ ಕೆಲವರ ಹಿಡಿತದಲ್ಲಿ ಇರುವುದನ್ನು ಧಿಕ್ಕರಿಸಿ ನಾನು ಹೊರಗೆ ಬಂದೆ, ಕೇಂದ್ರ ಸಚಿವರು ರಾಜ್ಯದಲ್ಲಿ ಮೂರ್ನಾಲ್ಕು ಜನರಿದ್ದಾರೆ, ದಲಿತ ಜನಾಂಗದ ನಾರಾಯಣಸ್ವಾಮಿ ರಾಜ್ಯ ಖಾತೆ ಸಚಿವ, ಒಕ್ಕಲಿಗ ಸಮುದಾಯದ ಶೋಭಾ ಕರಂದ್ಲಾಜೆ ರಾಜ್ಯ ಖಾತೆ, ಲಿಂಗಾಯತರಾದ ಭಗವಂತ ಖೂಬಾ, ದಿ. ಸುರೇಶ ಅಂಗಡಿ ಕೂಡ ರಾಜ್ಯ ಖಾತೆ, ಆದರೆ ಪ್ರಲ್ಹಾದ್ ಜೋಶಿ ಮಾತ್ರ ಸಂಪುಟ ದರ್ಜೆ ಕೇಂದ್ರ ಸಚಿವರು, ಇದರ ಸೂಕ್ಷ್ಮತೆಯನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ವ್ಯಂಗ್ಯವಾಡಿದರು.
ಯಾರಿಗೆ ಪ್ರಾಧಾನ್ಯತೆ ಕೊಟ್ಟಿದ್ದಾರೆ ಅನ್ನೋದನ್ನು ಜನರ ತಿಳುವಳಿಕೆಗೆ, ಚರ್ಚೆಗೆ ಬಿಡುತ್ತೇನೆ, ಗುಲಾಮಿ ಸಂಸ್ಕೃತಿಗೆ ಒಗ್ಗುವ, ಜೀ ಹುಜೂರ್ ಅನ್ನುವ ಶಾಸಕರು ಇರಬೇಕು ಅನ್ನೋದು ಸಂತೋಷ್ ನಿಲುವು ಎಂದು ಜಗದೀಶ್ ಶೆಟ್ಟರ್ ಕಿಡಿಕಾರಿದರು.
ಬಸವರಾಜ್ ಬೊಮ್ಮಾಯಿ ಬಿಜೆಪಿ ಸೇರಿದಾಗ ನಾವು, ಯಡಿಯೂರಪ್ಪ ಒಪ್ಪಿಗೆ ಕೊಟ್ಟೆವು, ಯಡಿಯೂರಪ್ಪನವರಿಗೆ ಹೊಸ ಪಕ್ಷ ಕಟ್ಟಲು ಪ್ರಚೋದನೆ ಕೊಟ್ಟವರು ಕೆಲವೇ ಕೆಲವರು, ಅವರಲ್ಲಿ ಬಸವರಾಜ ಬೊಮ್ಮಾಯಿ, ನಿರಾಣಿ ಮತ್ತು ಉದಾಸಿ ಇದ್ದಾರೆ. ನಂತರ ಉದಾಸಿ ಬಿಟ್ಟು ಯಾರೂ ಕೆಜೆಪಿಗೆ ಹೋಗಲಿಲ್ಲ, ಬಿಜೆಪಿ, ಕೆಜೆಪಿ ಡಿವೈಡ್ ಆದ ಮೇಲೆ ಬೊಮ್ಮಾಯಿ ಕಾಂಗ್ರೆಸ್ ಹೋಗುವ ಪ್ರಯತ್ನ ಮಾಡಿದರು ಎಂದು ಆರೋಪಿಸಿದರು.
ಬೊಮ್ಮಾಯಿ ಕಾಂಗ್ರೆಸ್ ಹೋಗಲು ಪ್ರಯತ್ನಿಸಿದಾಗ ಬೊಮ್ಮಾಯಿಯವರ ಸಿದ್ಧಾಂತ ಎಲ್ಲಿ ಹೋಗಿತ್ತು? ತಾವು ಕೇಳಿದ ಕ್ಷೇತ್ರ ಕೊಟ್ಟಿದ್ರೆ ಕಾಂಗ್ರೆಸ್ ಹೋಗುತ್ತಿದ್ರು, ಕೊಡಲಿಲ್ಲ ಅಂತಾ ಬಿಜೆಪಿಯಲ್ಲಿಯೇ ಉಳಿದರು. ತಂದೆ ಎಸ್.ಆರ್. ಬೊಮ್ಮಾಯಿ ಫಿಲಾಸಫಿ ಬಿಟ್ಟು ಅಧಿಕಾರಕ್ಕಾಗಿ ಬಿಜೆಪಿಗೆ ಬಂದಿದ್ದು ಬಸವರಾಜ ಬೊಮ್ಮಾಯಿ ಎಂದು ಟಿಕೀಸಿದರು.

ಚಿತ್ತಾಪುರದಲ್ಲಿ ರೌಡಿಶೀಟರ್ ಮಣಿಕಂಠ ರಾಠೋಡ್ ಕರೆದು ಟಿಕೆಟ್ ಕೊಟ್ಟಿದ್ದೀರಿ, ಇದು ನಿಮ್ಮ ಐಡಿಯಾಲಜಿ, ತತ್ವ ಏನು?, ಆರು ಜನ ಸಚಿವರ ಮೇಲೆ ಸಿಡಿ ಕೇಸ್ ಇವೆ, ಸಿಡಿ ಕೇಸ್ ಇದ್ದರೂ ಟಿಕೆಟ್ ಕೊಡ್ತೀರಲ್ಲಾ ಇದು ನಿಮ್ಮ ಐಡಿಯಾಲಜಿ ಎಂದು ವ್ಯಂಗ್ಯವಾಡಿದರು.
ಶೆಟ್ಟರ್ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲ, ಪಿಎಮ್ ಮೋದಿಜಿಯವರು ಬೆಂಗಳೂರಲ್ಲಿ ರೋಡ್‌ಶೋ ಮಾಡಿದರು. ಎಲೆಕ್ಷನ್ ಕ್ಯಾಂಪೇನ್ ಮಾಡುವಾಗ ಸಿಎಮ್, ಯಡಿಯೂರಪ್ಪರನ್ನು ಕರೆದುಕೊಂಡು ಹೋಗಿಲ್ಲ, ಸದಾನಂದಗೌಡರನ್ನು ಕೆಳಗಿಳಿಸಿ ಕಳಿಸ್ತಾರೆ, ಉಳಿದ ಸಮಾಜದ ವ್ಯಕ್ತಿಗಳ ಬಗ್ಗೆ ಇವರಿಗಿರುವ ಕಾಳಜಿ ಇದರಿಂದ ತಿಳಿಯುತ್ತದೆ ಎಂದು ಟಿಕೀಸಿದರು.
ಬಿಜೆಪಿಯಲ್ಲಿ ಬಹಳಷ್ಟು ನನ್ನ ಹಿಂಬಾಲಕರನ್ನು ಒತ್ತಾಯಪೂರ್ವಕವಾಗಿ ಹಿಡಿದು ಇಟ್ಟುಕೊಳ್ಳುತ್ತಿದ್ದಾರೆ, ನಮ್ಮ ಬೆಂಬಲಿಗರು ಒಳಗೊಳಗೆ ನನ್ನ ಪರವಾಗಿ ಕೆಲಸ ಮಾಡುತ್ತಿದ್ದಾರೆ, ಐಟಿ, ಇಡಿಯ ಅನಗತ್ಯ ಕಿರುಕುಳಕ್ಕೆ ಹೆದರಿ ಕೆಲವರು ಹೊರಗೆ ಬರುತ್ತಿಲ್ಲ, ಇದು ಒಳ ಹೊಡೆತದ ಚುನಾವಣೆ, ನನ್ನ ಹಿತೈಷಿಗಳು ಬಿಜೆಪಿಗೆ ಒಳಹೊಡೆತ ಕೊಡಲಿದ್ದಾರೆ, ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಆರೋಪಿಸಿದರು.
ವಿಜಯ ಸಂಕೇಶ್ವರ್ ಹೇಳಿಕೆ ಹಿಂದೆ ಒತ್ತಡವಿದೆ, ಅವರ ಮೇಲೆ ಬೇರೆ ಬೇರೆ ರೀತಿ ಒತ್ತಡ ಹಾಕಿದ್ದಾರೆ, ಹೀಗಾಗಿ ಹೇಳಿಕೆ ಕೊಡುತ್ತಿದ್ದಾರೆ, ಅದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ, ಫ್ಲಡ್‌ಗೇಟ್ ಓಪನ್ ಆಗುತ್ತಿದೆ, ಬಿಜೆಪಿ ಕೊಚ್ಚಿ ಹೋಗಲಿದೆ, ಪಕ್ಷ ಮತ್ತು ನಾಯಕತ್ವದ ಆಧಾರದಲ್ಲಿ ಚುನಾವಣೆ ನಡೆಯುತ್ತವೆ, ನಾನು ವೈಯಕ್ತಿಕವಾಗಿ ನಿರ್ಧಾರ ಮಾಡಿದ್ದು ಇದು ನನ್ನ ಕೊನೆಯ ಚುನಾವಣೆ ಎಂದು ಸ್ಪಷ್ಟಪಡಿಸಿದರು.
ಭಜರಂಗದಳದ ಬಗ್ಗೆ ಜೋಶಿ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಲ್ಹಾದ್ ಜೋಶಿಯವರು ಮೇಲಿಂದ ಇಳಿದವರಾ? ಅವರು ಕೇಳಿದ ಪ್ರಶ್ನೆಗೆ ನಾನು ಉತ್ತರ ಕೊಡಬೇಕಿಲ್ಲ, ಜೋಶಿಯವರೆ ಪ್ರಾಮಾಣಿಕರಾಗಿದ್ದರೆ, ನಮ್ಮ ಬೆಂಬಲಿಗರಿಗೆ ಫೋನ್ ಮಾಡಿ ಬೆದರಿಕೆ ಹಾಕುವುದು ಬಿಡಿ ಎಂದು ಆಕ್ರೋಶವ್ಯಕ್ತಪಡಿಸಿದರು.
ನಿಮ್ಮ ಧಮ್ಕಿ ಆಡಿಯೋ ನಾನು ಕೇಳಿಸಿಕೊಂಡಿದ್ದೀನಿ, ಅವು ಬಿಡುಗಡೆ ಆದ್ರೆ ಸರಿಹೋಗಲ್ಲಾ, ಹಿರಿಯರಿಗೆ ಫೋನ್ ಮಾಡಿ ಬೆಳಗ್ಗೆಯಿಂದ ಸಂಜೆವರೆಗೆ ಒತ್ತಡ ಹೇರಿದ್ದಾರೆ, ಕೇಂದ್ರ ಸಚಿವ ಜೋಶಿ ದೆಹಲಿಗೆ ಹೋಗದೆ ಇಲ್ಲೇ ಠಿಕಾಣಿ ಹೂಡಿದ್ದಾರೆ, ಸೋಲಿನ ಭಯಕ್ಕೆ ಜೋಶಿ ಇಲ್ಲೆ ಉಳಿದುಕೊಂಡಿದ್ದಾರೆ, ನಾನು ಕಾಂಗ್ರೆಸ್‌ನಲ್ಲೇ ಇರುತ್ತೇನೆ ಮರಳಿ ಬಿಜೆಪಿಗೆ ಹೋಗಲ್ಲಾ, ಮೋದಿ ಇಲ್ಲದೆ ಬಿಜೆಪಿ ಅಧಿಕಾರಕ್ಕೆ ಬರುತ್ತಾ ಎಂದು ಪ್ರಶ್ನಿಸಿದರು