ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿ ಹಾಗು ಡಿಸಿಎಂ ಜತೆಗೆ ಎಂಟು ಮಂದಿ ಸಂಪುಟ ದರ್ಜೆ ಸಚಿವರ ಪದಗ್ರಹಣ ಸಮಾರಂಭ ವಿವಿಧ ರಾಜ್ಯಗಳ ನಾಯಕರ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆ ಒದಗಿಸಿತು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ದೇಶದ ವಿವಿಧ ರಾಜ್ಯಗಳ ವಿವಿಧ ಪಕ್ಷಗಳ ಮುಖಂಡರು ಪಾಲ್ಗೊಂಡು ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗು ಎಂಟು ಮಂದಿ ಸಂಪುಟ ದರ್ಜೆ ಸಚಿವರಿಗೆ ಶುಭ ಕೋರಿದರು.

ವಿವಿಧ ಪಕ್ಷಗಳ ನಾಯಕರ ಒಟ್ಟುಗೂಡುವಿಕೆ ಕಾಂಗ್ರೆಸ್ ಪಕ್ಷದ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿತು.
ಸಮಾರಂಭದ ವೇದಿಕೆ ಮೇಲಿದ್ದ ವಿವಿಧ ಪಕ್ಷಗಳ ನಾಯಕರು ಒಟ್ಟಾಗಿ ತಮ್ಮ ಕೈಗಳನ್ನು ಮೇಲೆತ್ತುವುದರ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು.
ಮುಂಬರುವ 2024 ರ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಎದುರಿಸಲು ಒಗ್ಗಟ್ಟಿನ ಪ್ರಯತ್ನಗಳ ನಡುವೆ ಈ ಘಟನೆಯು ವಿರೋಧ ಪಕ್ಷಗಳಿಗೆ ಶಕ್ತಿ ಪ್ರದರ್ಶನವಾಗಿ ಪರಿಣಮಿಬಹುದು ಎಂದು ಅಂದಾಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಎಐಸಿಸಿ ಆಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಒಡಿಶಾ ಸಿಎಂ ನವೀನ್ ಪಟ್ನಾಯಕ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಜಾರ್ಖಂಡ್ ರಾಜ್ಯದ ಸಿಎಂ ಹೇಮಂತ್ ಸೊರೇನ್, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲಾ, ಸುಖ್ವಂದರ್ ಸಿಂಗ್ ಸುಕು, ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬ, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಇತರರು ವೇದಿಕೆಯಲ್ಲಿ ಇದ್ದರು