ಬೆಂಗಳೂರು: ಹೈಕಮಾಂಡ್ ನಮ್ಮ ತಂದೆಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕಿತ್ತು ಎಂದು ಸಚಿವ ಜಮೀರ್ ಅಹಮದ್ ಪುತ್ರ ಝೈದ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಮ್ಮ ತಂದೆ ಜಮೀರ್ ಅವರಿಗೆ ಸಿದ್ದರಾಮಯ್ಯ ಮುಖ್ಯ ಮಂತ್ರಿ ಗದ್ದುಗೆ ಏರಬೇಕು ಎಂಬ ಆಸೆ ಇತ್ತು. ಅದರಂತೆ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಮುಂಬರುವ ದಿನಗಳಲ್ಲಿ ಡಿಕೆ ಶಿವಕುಮಾರ್ ಅವರು ಸಹ ಸಿಎಂ ಆಗುತ್ತಾರೆ ಎಂದಿದ್ದಾರೆ.
ಮುಸ್ಲಿಂ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡಬಹುದು ಎಂಬ ಚರ್ಚೆ ಚಾಲ್ತಿಯಲ್ಲಿತ್ತು ಎಂಬ ಪ್ರಶ್ನೆಗೆ, ಹೈಕಮಾಂಡ್ ಜಮೀರ್ ಅವರಿಗೆ ಡಿಸಿಎಂ ಸ್ಥಾನ ನೀಡಬಹುದು ಎಂಬ ನಿರೀಕ್ಷೆ ಇತ್ತು. ಯಾಕೆಂದರೆ ಈ ಬಾರಿ ಶೇ.೮೦ ರಷ್ಟು ಓಟಾಗಿದೆ. ಎಲ್ಲಾ ಮುಸ್ಲಿಂ ಮತದಾರರು ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಾರೆ. ಹೀಗಾಗಿ ನಾವು ಸಹ ಈ ಬಗ್ಗೆ ಆಸೆ ಇಟ್ಟುಕೊಂಡಿದ್ದೆವು. ಆ ಸ್ಥಾನ ಸಿಗದಿದ್ದರೂ ಎಂದಿಗೂ ನಾನು ಡಿಸಿಎಂ ಮಗನೇ ಎಂದು ಹೇಳಿದ್ದಾರೆ.