ಬೆಂಗಳೂರು: ನಿಮ್ಮೆಲ್ಲರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿದೆ. ಸರ್ಕಾರ ಬರಲು ರಾಜ್ಯದ ಜನರ ಆಶೀರ್ವಾದ ಕಾರಣ..ಇದು ಕನ್ನಡಿಗರ ಜಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕದ ೨೫ ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗು ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದರು. ನೂತನ ಸಿಎಂಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣ ವಚನ ಬೋಧಿಸಿದರು.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಿರ್ಮಿಸಿದ್ದ ಅದ್ದೂರಿ ವೇದಿಕೆಯಲ್ಲಿ ಸಂವಿಧಾನ ಗೌಪ್ಯತೆ ಪ್ರತಿಜ್ಞೆ ಸ್ವೀಕಾರ ಸಮಾರಂಭದಲ್ಲಿ ಮಧ್ಯಾಹ್ನ ಸರಿಯಾಗಿ 12:30 ಗಂಟೆಗೆ ಕೃತ್ತಿಕಾ ನಕ್ಷತ್ರ, ಅಜಗಂಡ ನಾಮಯೋಗ, ಸಿಂಹಲಗ್ನದಲ್ಲಿ ಸಿದ್ದರಾಮಯ್ಯ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಎರಡನೇ ಬಾರಿಗೆ ಸಿಎಂ ಗದ್ದುಗೆ ಏರುತ್ತಿರುವ ಸಿದ್ದರಾಮಯ್ಯ ಸರ್ಕಾರ ಬರಲು ಕಾರಣಕರ್ತರಾದ ಎಲ್ಲರಿಗೂ ಧನ್ಯವಾದ ತಿಳಿಸಿದರು. ಕಾಂಗ್ರೆಸ್ ಗೆ ಸಿಕ್ಕ ಜಯ ಕನ್ನಡಿಗರಿಗೆ ಸಿಕ್ಕ ಜಯ. ಭಾರತ್ ಜೋಡೋ ಕಾರಣದಿಂದ ನಾವು ಅಧಿಕಾರಕ್ಕೆ ಬಂದೆವು. ಖರ್ಗೆ,ಪ್ರಿಯಾಂಕ ಗಾಂಧಿಯವರ ಮಾರ್ಗದರ್ಶನವಿದೆ. ಅವರೆಲ್ಲರಿಗೂ ನಾನು ಧನ್ಯವಾದ ಅರ್ಪಿಸ್ತೇನೆ. ಸಾಹಿತಿ,ಚಿಂತಕರಿಗೆ ಧನ್ಯವಾದ. ರೈತರು,ಕಾರ್ಮಿಕರಿಗೆ ಧನ್ಯವಾದ. ಪದಗ್ರಹಣ ಕ್ಕೆ ಅನೇಕ ನಾಯಕರು ಬಂದಿದ್ದಾರೆ. ಎಲ್ಲ ನಾಯಕರಿಗೆ ನಾನು ಧನ್ಯವಾದ ಹೇಳ್ತೇನೆ ಎಂದು ತಿಳಿಸಿದರು.

ಇನ್ನು ಸಿಎಂ ಜೊತೆ ಡಿಸಿಎಂ ಆಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದರು. ಅಲ್ಲದೆ ಇದೇ ವೇಳೆ 8 ಜನರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಸಂಪುಟ ದರ್ಜೆ ಸಚಿವರಾಗಿ ಡಾ.ಜಿ.ಪರಮೇಶ್ವರ್ ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ, ಕೆ.ಎಚ್. ಮುನಿಯಪ್ಪ ಹಾಗು ಕೆಜೆ ಜಾರ್ಜ್, ಬಬಲೇಶ್ವರ ಶಾಸಕ ಎಂಬಿ ಪಾಟೀಲ್, ಚಿತ್ತಾಪುರ ಶಾಸಕ ಪ್ರಿಯಾಂಕ ಖರ್ಗೆ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇನ್ನು ಬೆಳಗಾವಿ ಜಿಲ್ಲೆ ಯಮಕನಮರಡಿಯ ಸತೀಶ್ ಜಾರಕಿಹೊಳಿ ಅವರು ಬುದ್ಧ ಮತ್ತು ಬಸವಣ್ಣರ ಹೆಸರಿನಲ್ಲಿ ಪ್ರಮಾಣ ವಚನ ಪಡೆದು ಗಮನ ಸೆಳೆದರು. ಬಿಟಿಎಂ ಲೇಔಟ್ ನ ರಾಮಲಿಂಗಾ ರೆಡ್ಡಿ ಶ್ರದ್ಧಾ ಪೂರ್ವಕವಾಗಿ ಮತ್ತು ಚಾಮರಾಜಪೇಟೆ ಜಮೀರ್ ಅಹ್ಮದ್ ಅವರು ಆಂಗ್ಲ ಭಾಷೆಯಲ್ಲಿ ಅಲ್ಲಾನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಗಾಂಧಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಛತ್ತೀಸ್‌ಗಢ ಮುಖ್ಯಮಂತ್ರಿ ಬೂಪೇಶ್ ಬಗೇಲಾ, ಸುಖ್ವಂದರ್ ಸಿಂಗ್ ಸುಕು, ಎಂ.ಕೆ. ಸ್ಟಾಲಿನ್ ಮಾಜಿ ಮುಖ್ಯಮಂತ್ರಿ ಮೆಹಬೂಬ, ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಇತರರು ವೇದಿಕೆಯಲ್ಲಿದ್ದರು.
ಪದಗ್ರಹಣ ಸಮಾರಂಭಕ್ಕೆ ನಟ ಶಿವರಾಜ್ ಕುಮಾರ್, ದುನಿಯಾ ವಿಜಯ್ , ನಟಿ ರಮ್ಯಾ, ಕಮಲ್ ಹಾಸನ್, ರಾಜೇಂದ್ರ ಸಿಂಗ್ ಬಾಬು, ಮಾಜಿ ಸಚಿವೆ ಉಮಾಶ್ರೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.