ಬೆಂಗಳೂರು : ವೈಯಕ್ತಿಕ ಪ್ರತಿಷ್ಠೆ, ತಮಗೆ ಬೇಕಾದವರು ಹಾಗೂ ಬುದ್ದಿಜೀವಿ ಎಂದು ಘೋಷಿಸಿಕೊಂಡಿರುವ ಕೆಲವು ವ್ಯಕ್ತಿಗಳಿಂದ ಪಠ್ಯಪುಸ್ತಕ ಪರಿಷ್ಕರಣೆ ಮಾಡಲು ರಾಜ್ಯ ಸರ್ಕಾರ ಹೊರಟಿದ್ದು, ಮಕ್ಕಳ ಶಿಕ್ಷಣ ಮತ್ತು ಆರೋಗ್ಯವನ್ನು ಕಡೆಗಣಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಮಾಜಿ ಸಚಿವ ಬಿಸಿ ನಾಗೇಶ್ ದೂರಿದರು.
ರಾಜ್ಯ ಸರ್ಕಾರದ ಪಠ್ಯ ಪರಿಷ್ಕರಣೆ ವಿರೋಧಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿದ ಮಾಜಿ ಸಚಿವರು, ಚುನಾವಣೆಗೆ ಮುನ್ನ ಘೋಷಿಸಿದ್ದ ಉಚಿತ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಷರತ್ತುಗಳ ಮೇಲೆ ಷರತ್ತು ಹಾಕಿ, ಮತ ಹಾಕಿದ ಜನರಿಗೆ ನಂಬಿಕೆ ದ್ರೋಹ ಮಾಡಿರುವ ಕಾಂಗ್ರೆಸ್ ಸರ್ಕಾರ, ಶಿಕ್ಷಣ ಇಲಾಖೆಯಲ್ಲಿ ಆಗಬೇಕಿರುವ ಮುಖ್ಯ ಕೆಲಸಗಳನ್ನು ಬಿಟ್ಟು ಪಠ್ಯ ಪುಸ್ತಕ ಪರಿಷ್ಕರಣೆಗೆ ಕೈ ಹಾಕಿ ಮಕ್ಕಳಲ್ಲಿ ಗೊಂದಲ ಸೃಷ್ಟಿಸುತ್ತಿರುವುದು ಖಂಡನೀಯ ಎಂದರು.

ಕಲಿಕಾ ಚೇತರಿಕೆ ಅನುಷ್ಠಾನ, ಸರ್ಕಾರಿ ಶಾಲಾ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ವಿತರಣೆ ಹಾಗೂ ಶಿಕ್ಷಕರ ನೇಮಕ ಪ್ರಕ್ರಿಯೆ ಪೂರ್ಣಗೊಳಿಸುವುದು ಸೇರಿದಂತೆ ಅನೇಕ ವಿಷಯಗಳು ರಾಜ್ಯದ ಮುಖ್ಯಮಂತ್ರಿಯವರ ಮುಂದಿವೆ. ಆದರೆ, ಅವುಗಳ ಬಗ್ಗೆ ಗಮನಹರಿಸುವುದನ್ನು ಬಿಟ್ಟು, ತಮ್ಮ ಸುತ್ತ-ಮುತ್ತ ಬುದ್ದಿಜೀವಿಗಳೆಂದು ಹೇಳಿಕೊಂಡು ಓಡಾಡುವ ಕೆಲ ವ್ಯಕ್ತಿಗಳನ್ನು ಖುಷಿ ಪಡಿಸುವ ಪ್ರಯತ್ನವನ್ನು ಸಿಎಂ ಮಾಡುತ್ತಿದ್ದಾರೆ ಎಂದು ದೂರಿದರು.
ಬುದ್ಧಿಜೀವಿಗಳು ತಮಗೆ ಬೇಕೆನಿಸುವ ವಿಚಾರಗಳನ್ನು ಪಠ್ಯಪುಸ್ತಕಗಳಲ್ಲಿ ತುಂಬುವ ಮೂಲಕ ತಮ್ಮ ಅಜೆಂಡಾಗಳನ್ನು ಮುಗ್ಧ ಮಕ್ಕಳ ಮನಸ್ಸಿನಲ್ಲಿ ತುಂಬಲು ಮತ್ತೆ ಪ್ರಯತ್ನಿಸುತ್ತಿದ್ದಾರೆ. ಇಂತಹ ಕೆಲಸಗಳಿಗೆ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು.
ಸರ್ಕಾರಿ ಶಾಲೆಗಳು ಹಾಗೂ ಬಡ ಮಕ್ಕಳ ಶಿಕ್ಷಣದ ಕಡೆ ತುರ್ತಾಗಿ ಗಮನ ಹರಿಸಬೇಕಿದೆ. ಕೋವಿಡ್ – 19 ಹಿನ್ನೆಲೆಯಲ್ಲಿ ಶಾಲಾ ಮಕ್ಕಳಲ್ಲಿ ಉಂಟಾಗಿದ್ದ ಕಲಿಕಾ ನಷ್ಟವನ್ನು ಸರಿದೂಗಿಸಲು ನಮ್ಮ ಬಿಜೆಪಿ ಸರ್ಕಾರ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿತ್ತು. ಕಾರ್ಯಕ್ರಮದ ಯಶಸ್ವಿ ಅನುಷ್ಠಾನದಿಂದ ಮಕ್ಕಳ ಕಲಿಕಾ ಹಿನ್ನಡೆಯನ್ನು ಸರಿದೂಗಿಸಲು ಸಾಧ್ಯವಾಗಿದೆ. 2023-24ನೇ ಸಾಲಿನಲ್ಲಿ ‘ಕಲಿಕಾ ಚೇತರಿಕೆ 2.0’ ಮುಂದುವರೆಸುವ ಅಗತ್ಯತೆ ಇದೆ. ಸುಮಾರು 70 ಕೋಟಿ ರೂ. ವೆಚ್ಚದ ಈ ಕಾರ್ಯಕ್ರಮ ಅನುಷ್ಠಾನದ ಬಗ್ಗೆ ರಾಜ್ಯ ಸರ್ಕಾರ ಅಸಡ್ಡೆ ತೋರಿದೆ. ಈ ಮೂಲಕ ಸರ್ಕಾರಿ ಶಾಲಾ ಮಕ್ಕಳ ವಿರೋಧಿ ನಿಲುವು ತಳೆದಿದೆ ಎಂದು ಕುಟುಕಿದರು.
ಇಡೀ ದೇಶದಲ್ಲೇ ಮಾದರಿಯಾಗಿ ರೂಪಿಸಿರುವ ‘ಕಲಿಕಾ ಚೇತರಿಕೆ’ ಕಾರ್ಯಕ್ರಮದ ಬಗ್ಗೆ ಕೇಂದ್ರ ಶಿಕ್ಷಣ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿತ್ತು. ದೇಶದ ಹಲವಾರು ರಾಜ್ಯಗಳು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಮಾದರಿಯಾಗಿ ತೆಗೆದುಕೊಂಡು ಅನುಷ್ಠಾನಗೊಳಿಸಿವೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕಲಿಕಾ ಚೇತರಿಕೆ ಬಗ್ಗೆ ರಾಜ್ಯದ ಶಿಕ್ಷಣ ಇಲಾಖೆ ಯೋಚಿಸಬೇಕಿದೆ.

ಶಿಕ್ಷಣ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಖಾಲಿ ಇದ್ದ ಶಿಕ್ಷಕರ ಕೊರತೆ ನೀಗಿಸಲು 15 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆಯನ್ನು ನಮ್ಮ ಬಿಜೆಪಿ ಸರ್ಕಾರ ಬಹುತೇಕ ಪೂರ್ಣಗೊಳಿಸಿತ್ತು. ವಿವಿಧ ಕಾರಣಗಳಿಂದ ನೇಮಕ ಪ್ರಕ್ರಿಯೆ ನ್ಯಾಯಾಲಯದಲ್ಲಿದೆ. ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡು ನೇಮಕಾತಿ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕಿದೆ. ಇದರಿಂದ ಸರ್ಕಾರಿ ಶಾಲೆಗಳ ಲಕ್ಷಾಂತರ ಮಕ್ಕಳ ವ್ಯಾಸಂಗಕ್ಕೆ ಅನುಕೂಲವಾಗಲಿದೆ. ಶಿಕ್ಷಕ ಆಕಾಂಕ್ಷಿಗಳ ಜೀವನವೂ ರೂಪಗೊಳ್ಳುತ್ತದೆ ಎಂದರು.
ಸರ್ಕಾರಿ ಶಾಲೆಗಳ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಿಸುವ ಜೊತೆಗೆ ಪೂರಕ ಪೌಷ್ಟಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ/ ಬಾಳೆಹಣ್ಣು/ಚಿಕ್ಕಿ ವಿತರಣೆ ಆರಂಭಿಸಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಈ ವರ್ಷ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ಮುಂದುವರೆಸುವ ವಿಚಾರದಲ್ಲಿ ಮೌನ ತಾಳಿದೆ. ಶಾಲೆಗಳು ಆರಂಭವಾಗಿ ಒಂದು ವಾರ ಕಳೆದರೂ ಪೂರಕ ಪೌಷ್ಟಿಕ ಆಹಾರ ವಿತರಣೆ ಬಗ್ಗೆ ಮುಖ್ಯಮಂತ್ರಿಗಳಾಗಲಿ, ಸಚಿವರಾಗಲಿ ಬಾಯಿ ಬಿಡುತ್ತಿಲ್ಲ. ಇದನ್ನು ಗಮನಿಸಿದರೆ ಸರ್ಕಾರದ ಆದ್ಯತೆ ಬಡ ಮಕ್ಕಳ ಶಿಕ್ಷಣ ಅಲ್ಲ ಎಂದು ಸ್ಪಷ್ಟವಾಗುತ್ತಿದೆ ಎಂದು ದೂರಿದರು.
#EDUCATIONSYSYTEM #BCNAGESH #SIDDARAMAIAH #CMKARNATAKA #INTELLECTUAL