DCM CITY ROUNDS: ಮಳೆ ಪೀಡಿತ ಪ್ರದೇಶಗಳಿಗೆ ಡಿಸಿಎಂ ಭೇಟಿ, ಪರಿಶೀಲನೆ: ಶಿವರಾಮಕಾರಂತ ಲೇಔಟ್ ಕಾಮಗಾರಿ ಪರಿಶೀಲನೆ

ಬೆಂಗಳೂರು : ಶಿವರಾಮ ಕಾರಂತ ಲೇಔಟ್ ಕಾಮಗಾರಿ ಮುಂದುವರಿಸಲು ನ್ಯಾಯಮೂರ್ತಿ ನಜೀರ್ ಅವರು ಆದೇಶಿಸಿರುವ ಹಿನ್ನೆಲೆಯಲ್ಲಿ ಈ ಯೋಜನೆ ಕುರಿತು ನ್ಯಾಯಮೂರ್ತಿಗಳಾದ ಚಂದ್ರಶೇಖರ್, ರಮೇಶ್ ಹಾಗೂ ಬೆಂಗಳೂರು ನಗರಾಭಿೃದ್ಧಿ ಕಾರ್ಯದರ್ಶಿಗಳು, ಬಿಡಿಎ ಮುಖ್ಯಸ್ಥರ ಜೊತೆ ಚರ್ಚೆ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರು ನಗರದ ಕೆಲವು ಪ್ರದೇಶಗಳಿಗೆ ಭೇಟಿ ನೀಡುವ ಮುಂಚೆ ಇಂದು ಬಿಡಿಎ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೇಔಟ್ ಯೋಜನೆ, ಕಾಮಗಾರಿ ಪ್ರಗತಿ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದು, ಈ ಯೋಜನೆಯಲ್ಲಿ ಜಮೀನು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಸಿಗಬೇಕು. ಬಿಡಿಎಗೂ ಪ್ರಯೋಜನ ಆಗಬೇಕು ಎಂಬುದು ನಮ್ಮ ಉದ್ದೇಶ ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ಕೆಲಸ ಆಗುತ್ತಿದೆಯೇ ಇಲ್ಲವೇ ಎಂಬುದರ ಬಗ್ಗೆ ಮಾಹಿತಿ ಪಡೆದಿದ್ದೇನೆ. ಕಂದಾಯ ನಿವೇಶನಕ್ಕೆ ಅರ್ಜಿ ಹಾಕಿರುವ ಬಡವರಿಗೆ ಅನ್ಯಾಯ ಆಗಬಾರದು. ಕಾನೂನು ಚೌಕಟ್ಟಿನಲ್ಲಿ ಎಲ್ಲರ ರಕ್ಷಣೆ ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.

ಮಳೆಗಾಲ ಆರಂಭವಾಗುತ್ತಿದ್ದು, ಎಲ್ಲೆಲ್ಲಿ ನೀರು ನಿಲ್ಲುತದೆಯೋ ಅಂತಹ ಅತ್ಯಂತ ಪ್ರಮುಖ ಪ್ರದೇಶಗಳಿಗೆ ಇಂದು ಭೇಟಿ ನೀಡುತ್ತಿದ್ದೇನೆ. ಮಳೆ ಬಂದಾಗ ಸಮಸ್ಯೆ ಎದುರಾದರೆ ಅದನ್ನು ನಿಭಾಯಿಸಲು ಯಾವ ಕಾರ್ಯಯೋಜನೆ ರೂಪಿಸಿದ್ದೀರಿ ಎಂದು ಮಾಹಿತಿ ಪಡೆದಿದ್ದೇನೆ.
ಮಳೆ ಬಂದಾಗ ಸಮಸ್ಯೆ ಉಂಟಾಗಿ ಬೆಂಗಳೂರು ನಗರಕ್ಕೆ ಕೆಟ್ಟ ಹೆಸರು ಬರಬಾರದು ಎಂದು ಆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದರು.

More News

You cannot copy content of this page