WILL NOT TOLARATE UNETHICAL POLICING: ನಾಡಿನ ನೆಮ್ಮದಿ ಕೆಡಿಸುವವರ ವಿರುದ್ದ ಕಠಿಣ ಕ್ರಮ: ಜನವಿರೋಧಿ ಕಾಯಿದೆ ರದ್ದು: ಸಿದ್ದರಾಮಯ್ಯ

ಬೆಂಗಳೂರು : ಕನ್ನಡ ನಾಡಿನ ನೆಮ್ಮದಿ ಕೆಡಿಸುವವರ ವಿಚಾರದಲ್ಲಿ ನಿರ್ಧಾಕ್ಷಿಣ ಕ್ರಮಕೈಗೊಂಡು ಜನರಲ್ಲಿ ಸುರಕ್ಷತೆಯ ಭಾವ ಮೂಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸರಣಿ ಟ್ವೀಟ್ ಮೂಲಕ ರಾಜ್ಯದ ಜನತೆಗೆ ಸ್ಪಷ್ಟ ಸಂದೇಶ ನೀಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮರುಪರಿಶೀಲಿಸಿ, ಹೊಸ ನೀತಿ ಜಾರಿ ಮಾಡುವ ಜೊತೆಗೆ ಹಲವು ಜನ ವಿರೋಧಿ ಕಾಯ್ದೆಗಳನ್ನು ರದ್ದುಪಡಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಅದೇ ರೀತಿಯಲ್ಲಿ ಇನ್ನು ಮುಂದೆ ರಾಜ್ಯದಲ್ಲಿ ಅನೈತಿಕ ಪೊಲೀಸ್‌ಗಿರಿಗೆ ಅವಕಾಶವಿಲ್ಲ ಎಂದು ಕಟ್ಟೆಚ್ಚರ ನೀಡಿದ್ದಾರೆ. ಅವರ ಟ್ವೀಟ್ ನ ಸಂಪೂರ್ಣ ವಿವರ ಇಲ್ಲಿದೆ.

ನಾಡಿನ ಜನತೆ BJP, RSS ಸಿದ್ಧಾಂತವನ್ನು ಚುನಾವಣೆಯಲ್ಲಿ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಇದಕ್ಕಾಗಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಶ್ರಮಿಸಿದವರ ನಿರೀಕ್ಷೆಗೆ ತಕ್ಕಂತೆ ನಮ್ಮ ಸರ್ಕಾರ ಕೆಲಸ ಮಾಡಲಿದೆ.
ಕನ್ನಡ ನಾಡಿನ ನೆಮ್ಮದಿ ಕೆಡಿಸುವವರ ವಿಚಾರದಲ್ಲಿ ನಿರ್ಧಾಕ್ಷಿಣ್ಯ ಕ್ರಮ ಕೈಗೊಂಡು‌ ಜನರಲ್ಲಿ ಸುರಕ್ಷತೆಯ ಭಾವ ಮೂಡಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ.

ರಾಜ್ಯದಲ್ಲಿ ಬಡವರು, ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಭಯದ ವಾತಾವರಣದಲ್ಲಿ ಬದುಕುವ ಸನ್ನಿವೇಶ ಸೃಷ್ಟಿಯಾಗಿತ್ತು. ಇದನ್ನು ಬದಲಾಯಿಸಿ, ಈ ವರ್ಗಗಳ ಜನರಲ್ಲಿ ಸುರಕ್ಷತೆಯ ಭಾವ ಮೂಡಿಸಲು ಕೆಲಸ ಮಾಡುತ್ತೇವೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದೇವೆ.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಸಮಾಜದಲ್ಲಿ ಭೀತಿಯ ವಾತಾವರಣ ಸೃಷ್ಟಿಸುವವರು, ಸಾಮಾಜಿಕ ಜಾಲತಾಣಗಳ ಮೂಲಕ ಸಾಮರಸ್ಯ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದೇನೆ.
ಇನ್ನು ಮುಂದೆ ರಾಜ್ಯದಲ್ಲಿ ಅನೈತಿಕ ಪೊಲೀಸ್‌ಗಿರಿಗೆ ಅವಕಾಶವಿಲ್ಲ.

ನಾವು ನಾಡಿನ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇವೆ. ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುತ್ತೇವೆ. ಇದಕ್ಕೆ ವಾರ್ಷಿಕ 59,000 ಕೋಟಿ ರೂ. ಹಣಕಾಸಿನ ಅಗತ್ಯವಿದ್ದು, ಪ್ರಸಕ್ತ ವರ್ಷದ ಬಾಕಿ ಉಳಿದ ತಿಂಗಳುಗಳಿಗೆ ಯೋಜನೆ ಅನುಷ್ಠಾನಗೊಳಿಸಲು 41,000 ಕೋಟಿ ರೂ. ಗಳ ಅಗತ್ಯವಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮರುಪರಿಶೀಲಿಸಿ, ಹೊಸ ನೀತಿ ಜಾರಿ ಮಾಡುವ ಜೊತೆಗೆ ಹಲವು ಜನ ವಿರೋಧಿ ಕಾಯ್ದೆಗಳನ್ನು ರದ್ದುಪಡಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಒಟ್ಟಿನಲ್ಲಿ ರಾಜ್ಯದ ಜನತೆಗೆ ನೆಮ್ಮದಿಯ ವಾತಾವರಣ ಸೃಷ್ಟಿಸಲು, ರೈತರ ಹಿತ ಕಾಪಾಡಲು ಹಾಗೂ ಮಕ್ಕಳ ಭವಿಷ್ಯವನ್ನು ಸುಭದ್ರಗೊಳಿಸಲು ನಾವು ಬದ್ಧರಿದ್ದೇವೆ.

More News

You cannot copy content of this page