ಬೆಂಗಳೂರು : ಶಾಲಾ ಮಕ್ಕಳ ಬಹು ತೂಕದ ಬ್ಯಾಗ್ ಹೊರೆಯನ್ನು ತಗ್ಗಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ಮುಂದಾಗಿದ್ದು, ಒಂದರಿಂದ ಹತ್ತನೇ ತರಗತಿಯ ಮಕ್ಕಳ ಬ್ಯಾಗ್ ತೂಕವನ್ನು 1.5ಕೆಜಿಯಿಂದ 5 ಕೆ ಜಿ ಯವರೆಗೆ ನಿಗದಿಗೊಳಿಸಿ ಆದೇಶ ಹೊರಡಿಸಿದೆ.
ಒಂದರಿಂದ ಎರಡನೇ ತರಗತಿಯ ಮಕ್ಕಳಿಗೆ 1.5 ಕೆಜಿಯಿಂದ 2ಕಜಿಯವರೆಗೆ ಶಾಲಾ ಬ್ಯಾಗ್ ತೂಕ ಇರಬೇಕು. 3ರಿಂದ 5 ನೇ ತರಗತಿಗೆ 2 ಕೆಜಿಯಿಂದ 3 ಕೆಜಿ, 6ರಿಂದ 8 ನೇ ತರಗತಿ ಗೆ 3ರಿಂದ 4ಕೆಜಿ ತೂಕ ಹಾಗೂ 9ರಿದ 10ನೇ ತರಗತಿಯ ಮಕ್ಕಳಿಗೆ 4ರಿಂದ 5 ಕೆಜಿಯವರೆಗೆ ತೂಕದ ಶಾಲಾ ಬ್ಯಾಗ್ ಇರಬೇಕೆಂದು ಆದೇಶದಲ್ಲಿ ಸೂಚಿಸಿದೆ.

ಶಾಲಾ ಶಿಕ್ಷಕರು ಈ ಆದೇಶದನ್ವಯ ಅಗತ್ಯಕ್ಕೆ ತಕ್ಕಂತೆ ಅಂದಿನ ಪಠ್ಯಪುಸ್ತಕ ಹಾಗೂ ಇತರೆ ಕಲಿಕಾ ಸಾಮಾಗ್ರಿಗಳನ್ನು ಮಾತ್ರ ತರುವಂತೆ ಸೂಚನೆ ನೀಡಬೇಕು. ಶಾಲೆಯಲ್ಲಿಯೇ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು, ಶಾಲಾ ಬ್ಯಾಗ್ ನ ಹೊರೆಯಿಂದ ಮಕ್ಕಳ ಮೇಲೆ ಆಗುವ ದುಷ್ಪರಿಣಾಮಗಳನ್ನು ಮಕ್ಕಳ ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು. ಈ ನಿಯಮಗಳನ್ನು ಉಲ್ಲಂಘಿಸುವ ಶಿಕ್ಷಕರು ಹಾಗೂ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.

ಯಶಪಾಲ ಶರ್ಮ ಸಮಿತಿಯು 1993ರಲ್ಲಿ ನೀಡಿದ ಹೊರೆಯಿಲ್ಲದ ಕಲಿಕೆಯ ವರದಿ, ಕೇಂದ್ರ ಸರ್ಕಾರದ ಶಾಲಾ ಬ್ಯಾಗ್ ನೀತಿ 2020ಯಲ್ಲಿ ಉಲ್ಲೇಖಿಸಿದಂತೆ ಹಾಗೂ ಮಾನವ ಮೂಳೆ ತಜ್ಞರ ವರದಿಯ ಶಿಫಾರಸ್ಸಿನಂತೆ ಶಾಲಾ ಬ್ಯಾಗ್ ತೂಕವನ್ನು ನಿಗದಿಗೊಳಿಸಲಾಗಿದೆ. ಮಕ್ಕಳು ಮತ್ತು ಅವರ ದೇಹದ ತೂಕದ ಶೇಕಡಾ 10ರಿಂದ 15ರಷ್ಟು ಮಾತ್ರ ಭಾರ ಹೊರಲು ಶಕ್ತರಾಗಿರುವ ಹಿನ್ನೆಲೆಯಲ್ಲಿ ಆ ಸುತ್ತೊಲೆಯನ್ನು ಹೊರಡಿಸಲಾಗಿದೆ ಎಂದು ತಿಳಿಸಿದೆ.

