ಬೆಂಗಳೂರು: ನಾವು ಮಾತು ಕೊಟ್ಟಂತೆ ಜುಲೈ ೧ರಿಂದ ಅಂದರೆ ನಾಳೆಯಿಂದರೆ ಅನ್ನ ಭಾಗ್ಯ ಯೋಜನೆ ಜಾರಿಯಾಗಲಿದೆ ಎಂದು ಆಹಾರ ಖಾತೆ ಸಚಿವ ಕೆ ಹೆಚ್ ಮುನಿಯಪ್ಪ ತಿಳಿಸಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮನಸ್ಸು ಬದಲಾಯಿಸಿ ಅಕ್ಕಿ ಕೊಟ್ಟರೆ ಹಂಚಿಕೆ ಮಾಡಲಾಗುವುದು, ಇಲ್ಲದಿದ್ದರೆ ನಾಳೆಯಿಂದಲೇ ಹಣ ಹಾಕಲಾಗುವುದು ಎಂದು ತಿಳಿಸಿದರು.
ಕೇಂದ್ರದ ಬಳಿ ಅಕ್ಕಿ ದಾಸ್ತಾನು ಇದೆ, ಇಲ್ಲವೆ ಟೆಂಡರ್ ಕರೆದು ಅಕ್ಕಿ ಖರೀದಿ ಮಾಡುತ್ತೇವೆ, ಅಕ್ಕಿ ಸಿಗುವವರೆಗೆ ಮಾತ್ರ ಅಕೌಂಟ್ ಗೆ ಹಣ ಹಾಕಲಾಗುವುದು ಎಂದು ಸಚಿವ ಕೆ.ಹೆಚ್ ಮುನಿಯಪ್ಪ ಸ್ಪಷ್ಟಪಡಿಸಿದರು. ಪಡಿತರ ಚೀಟಿ ಹೊಂದಿರುವವರ ಅಕೌಂಟ್ ಗೆ ಹಣ ಹೋಗುತ್ತೆ, ಸೇಕಡಾ 90% ಅಕೌಂಟ್ ಹೊಂದಿರುವವರ ಬಗ್ಗೆ ಮಾಹಿತಿ ಇದೆ, ಒಬ್ಬರಿಗೆ 170 ರೂಪಾಯಿ ನೀಡಲಾಗುವುದು ಎಂದು ತಿಳಿಸಿದರು.

ಅಕ್ಕಿ ಸಿಗುವರೆಗೆ ಮಾತ್ರ ಈ ಹಣ ವರ್ಗಾವಣೆಯಾಗಲಿದೆ ಎಂದು ಹೇಳಿದ ಸಚಿವರು, ಅಕ್ಕಿ ದೊರೆತ ನಂತರ ಅಕ್ಕಿ ನೀಡಲಾಗುವುದು ಎಂದು ತಿಳಿಸಿದರು. ದಕ್ಷಿಣ ಕರ್ನಾಟಕದಲ್ಲಿ ರಾಗಿ ಕೊಡುತ್ತೇವೆ, ಉತ್ತರ ಕರ್ನಾಟಕ ಭಾಗಕ್ಕೆ ಜೋಳ ಕೊಡುತ್ತೇವೆ, ರಾಗಿ ದಾಸ್ತಾನು ಇದೆ, ಜೋಳ ದಾಸ್ತಾನು ಇಲ್ಲ, ದಾಸ್ತಾನು ಆದ ಬಳಿಕ ಧಾನ್ಯಗಳ ಹಂಚಿಕೆ ಮಾಡುತ್ತೇವೆ ಎಂದು ತಿಳಿಸಿದರು.