Rohith And Kohli Goodbye To Cricket: ಕ್ರಿಕೆಟ್‌ಗೆ ಗುಡ್ ಬೈ ಹೇಳ್ತಾರಾ ಕಿಂಗ್ ಕೊಹ್ಲಿ, ಹಿಟ್‌ಮ್ಯಾನ್ ರೋಹಿತ್..?

ವರ್ಷಾಂತ್ಯದಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ ಬಿಸಿಸಿಐ ತಯಾರಿ ಆರಂಭಿಸಿರುವ ಬೆನ್ನಲ್ಲೇ, ಟೀಂ ಇಂಡಿಯಾದ ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಕ್ರಿಕೆಟ್‌ಗೆ ಗುಡ್ ಬೈ ಹೇಳುತ್ತಾರೆ ಎನ್ನಲಾಗುತ್ತಿದೆ.

ಭಾರತ ತಂಡದಲ್ಲಿ ಈಗಾಗಲೇ ಯಂಗ್ ಇಂಡಿಯಾ, ಓಲ್ಡ್ ಇಂಡಿಯಾ ಎಂಬ ಚರ್ಚೆಗಳು ನಡೆಯುತ್ತಿದ್ದು, ಈಗಾಗಲೇ ಹಲವು ಹಿರಿಯ ಆಟಗಾರರು ಫಾರ್ಮ್ ವೈಫಲ್ಯ, ಫಿಟ್ನೆಸ್ ಸಮಸ್ಯೆ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಇದರ ಬೆನ್ನಲ್ಲೇ ಹಲವು ಯುವ ಆಟಗಾರರಿಗೆ ತಂಡದಲ್ಲಿ ಅವಕಾಶವನ್ನ ಸಹ ನೀಡಲಾಗುತ್ತಿದೆ. ಇವೆಲ್ಲದರ ನಡುವೆಯೇ ಭಾರತ ತಂಡದ ರನ್ ಮಷಿನ್ ವಿರಾಟ್ ಕೊಹ್ಲಿ, ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರುಗಳು ಜಾಗತಿಕ ಕ್ರಿಕೆಟ್‌ನಿಂದ ಹಂತ ಹಂತವಾಗಿ ಹೊರಗುಳಿಯುತ್ತಾರೆ ಎನ್ನಲಾಗುತ್ತಿದೆ. ಅಲ್ಲದೇ ಈ ಸಂಬಂಧ ಕ್ರಿಕೆಟ್ ಲೋಕದಲ್ಲಿ ಸಾಕಷ್ಟು ಗಂಭೀರ ಚರ್ಚೆಗಳು ಸಹ ನಡೆಯುತ್ತಿದ್ದು, ಹಲವು ಕ್ರಿಕೆಟ್ ಪರಿಣಿತರು ಸಹ ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಶ್ವ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಈ ಇಬ್ಬರು ಆಟಗಾರರು ಟೀಂ ಇಂಡಿಯಾದ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿದ್ದಾರೆ. ಹೀಗಾಗಿ ಟೆಸ್ಟ್, ಏಕದಿನ ಹಾಗೂ ಟಿ20 ಮಾದರಿಯಲ್ಲಿ ಈ ಇಬ್ಬರು ಸಹ ತಂಡದ ಪ್ರಮುಖ ಶಕ್ತಿಯಾಗಿದ್ದಾರೆ. ಸದ್ಯ ಇದೇ ವರ್ಷದ ಅಂತ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಯ ತಯಾರಿಯಲ್ಲಿರುವ ಈ ಇಬ್ಬರು, ವಿಶ್ವಕಪ್ ಬಳಿಕ ವೈಟ್ ಬಾಲ್ ಕ್ರಿಕೆಟ್‌ಗೆ ಗುಡ್ ಬೈ ಹೇಳುತ್ತಾರೆ ಎನ್ನಲಾಗಿದೆ.

ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಇಬ್ಬರು ಸಹ ಮುಂದಿನ ಕೆಲವು ವರ್ಷಗಳ ಕಾಲ ತಂಡದಲ್ಲಿ ಮುಂದುವರಿಯುತ್ತಾರೆ. ಪ್ರಮುಖವಾಗಿ ಮುಂಬರುವ 2023-25ನೇ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಟೂರ್ನಿಯಲ್ಲಿ ಈ ಇಬ್ಬರೂ ಭಾರತ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಇದಾದ ಬಳಿಕ ಕೊಹ್ಲಿ ಹಾಗೂ ರೋಹಿತ್ ಟೆಸ್ಟ್ ತಂಡದಿಂದಲೂ ಹೊರಗುಳಿಯುತ್ತಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ ಇವರಿಬ್ಬರು ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಬಳಿಕ ಟೀಂ ಇಂಡಿಯಾದಲ್ಲಿ ಇವರ ಸ್ಥಾನ ತುಂಬುವ ಆಟಗಾರರು ಯಾರು? ಎಂಬ ಕುತೂಹಲ ಹೆಚ್ಚಾಗಿದೆ.

ಸದ್ಯ ಟೀಂ ಇಂಡಿಯಾದಲ್ಲಿ ಬದಲಾವಣೆ ಪರ್ವ ಶುರುವಾಗಿದೆ. ಹೀಗಾಗಿಯೇ ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ತಂಡವನ್ನ ಪ್ರಕಟಿಸಿರುವ ಬಿಸಿಸಿಐ, ಯುವ ಆಟಗಾರರಿಗೆ ಮಣೆಹಾಕಿದೆ. ಪ್ರಮುಖವಾಗಿ ಭಾರತ ತಂಡದ ಟೆಸ್ಟ್ ಸ್ಪೆಷಲಿಸ್ಟ್‌ ಎನಿಸದ್ದ ಚೇತೇಶ್ವರ್ ಪುಜಾರ ಅವರನ್ನ ತಂಡದಿಂದ ಕೈಬಿಡಲಾಗಿದ್ದು, ಇವರ ಸ್ಥಾನಕ್ಕೆ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಅವರುಗಳನ್ನ ಆಯ್ಕೆ ಮಾಡಲಾಗಿದೆ. ಇನ್ನೂ ಬೌಲಿಂಗ್ ವಿಭಾಗದಲ್ಲೂ ಸಹ ಬದಲಾವಣೆ ನಿರೀಕ್ಷೆಯಲ್ಲಿರುವ ಬಿಸಿಸಿಐ ತಂಡದ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಆಟಗಾರರನ್ನ ಆಯ್ಕೆ ಮಾಡಿದೆ.

ಇನ್ನೂ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರುಗಳು ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದೆ ಆದಲ್ಲಿ ಕ್ರಿಕೆಟ್‌ ಲೋಕಕ್ಕೆ ಮಾತ್ರವಲ್ಲದೇ ಬಿಸಿಸಿಐಗೂ ಸಹ ಭಾರೀ ನಷ್ಟವಾಗಲಿದೆ. ವಿಶ್ವ ಕ್ರಿಕೆಟ್‌ನ ಸ್ಟಾರ್ ಆಟಗಾರರಾಗಿರುವ ಇವರಿಬ್ಬರಿಂದ ಬರುತ್ತಿರುವ ಟೆಲಿವಿಷನ್ ರೈಟ್ಸ್, ಜಾಹೀರಾತುಗಳು ಕಡಿಮೆಯಾಗುವ ಸಾಧ್ಯತೆ ಸಹ ಇದೆ. ಇದರಿಂದ ಬಿಸಿಸಿಐಗೆ ಬರುತ್ತಿದ್ದ ಆದಾಯಕ್ಕೂ ಕತ್ತರಿ ಬೀಳುವ ಸಾಧ್ಯತೆಯೂ ಇದೆ. ‌ಹೀಗಾಗಿ ಕೊಹ್ಲಿ ಮತ್ತು ರೋಹಿತ್ ಇನ್ನೂ ಕೆಲವು ವರ್ಷಗಳ ಕಾಲ ತಂಡದಲ್ಲಿ ಉಳಿದರು ಅಚ್ಚರಿಪಡುವಂತಿಲ್ಲ. ಅಲ್ಲದೇ ಕೊಹ್ಲಿ, ರೋಹಿತ್ ಅವರಂತಹ ಪ್ರಮುಖ ಆಟಗಾರರು ಏಕಾಏಕಿ ತಂಡದಿಂದ ಹೊರಗುಳಿದರೆ ಯುವ ಆಟಗಾರರ ಮೇಲೆ ಒತ್ತಡ ಸಹ ಹೆಚ್ಚಾಗಲಿದ್ದು, ತಂಡದ ಪ್ರದರ್ಶನದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಎಲ್ಲಾ ಕಾರಣದಿಂದಾಗಿ ಕೊಹ್ಲಿ ಮತ್ತು ರೋಹಿತ್ ಅವರು ಇನ್ನೂ ಕೆಲವು ವರ್ಷಗಳ ಕಾಲ ತಂಡದಲ್ಲಿ ಉಳಿಯಲಿದ್ದಾರೆ.

More News

You cannot copy content of this page