ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ನಾಳೆಯಿಂದ ಆರಂಭವಾಗಲಿದ್ದು, ಡೊಮಿನಿಕಾದಲ್ಲಿ ನಡೆಯುವ ಪಂದ್ಯಕ್ಕಾಗಿ ಟೀಂ ಇಂಡಿಯಾ ತಯಾರಿ ಮಾಡಿಕೊಂಡಿದೆ. ಈ ನಡುವೆ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಕೆರೆಬಿಯನ್ನರ ವಿರುದ್ಧ ಮಹತ್ವದ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.
ಕ್ರಿಕೆಟ್ ಲೋಕದ ದಾಖಲೆಗಳ ಸರದಾರ ಎನಿಸಿರುವ ಕಿಂಗ್ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ಗಳಿಸಿರುವ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ 6ನೇ ಸ್ಥಾನದಲ್ಲಿದ್ದು, ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಮ್ಮ ಸ್ಥಾನಕ್ಕೆ ಬಡ್ತಿ ಪಡೆಯುವತ್ತ ಚೇಸ್ ಮಾಸ್ಟರ್ ಕಣ್ಣಿಟ್ಟಿದ್ದಾರೆ. ನಿರೀಕ್ಷೆಯಂತೆ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದೇ ಆದಲ್ಲಿ, ಸೌತ್ ಆಫ್ರಿಕಾ ತಂಡದ ಮಾಜಿ ಕ್ರಿಕೆಟ್‌ಗ ಜಾಕಸ್ ಕಾಲಿಸ್ ಅವರ ದಾಖಲೆಯನ್ನ ಬ್ರೇಕ್ ಮಾಡಿ, 5ನೇ ಸ್ಥಾನಕ್ಕೇರಲಿದ್ದು, ಇದಕ್ಕಾಗಿ ವಿರಾಟ್ ಕೊಹ್ಲಿ ಕೇವಲ 149 ರನ್‌ಗಳಿಸಬೇಕಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸದ್ಯ 500 ಪಂದ್ಯಗಳ ಹೊಸ್ತಿಲಲ್ಲಿರುವ ವಿರಾಟ್ ಕೊಹ್ಲಿ, ಎಲ್ಲಾ ಫಾರ್ಮ್ಯಾಟ್ ಗಳಿಂದ ಒಟ್ಟು 498 ಪಂದ್ಯಗಳನ್ನ ಆಡಿದ್ದು, ಇದರಲ್ಲಿ 25385 ರನ್‌ಗಳಿಸಿದ್ದಾರೆ. ಕೊಹ್ಲಿ ಅವರ ಈ ಇನ್ನಿಂಗ್ಸ್‌ನಲ್ಲಿ ಒಟ್ಟು 75 ಶತಕ ಹಾಗೂ 130 ಅರ್ಧಶತಕಗಳನ್ನ ದಾಖಲಿಸಿದ್ದಾರೆ. ಹಾಗಾಗಿ ವೆಸ್ಟ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವ ಮೂಲಕ ತಮ್ಮ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಮತ್ತೊಂದು ಮೈಲುಗಲ್ಲು ತಲುಪಲಿದ್ದಾರೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ನಾಳೆ ಆರಂಭವಾಗಲಿದ್ದು, ಇದಕ್ಕಾಗಿ ಉಭಯ ತಂಡಗಳು ಸಕಲ ಸಿದ್ಧತೆ ಮಾಡಿಕೊಂಡಿವೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದ ಬಳಿಕ ಒಂದು ತಿಂಗಳ ಕಾಲ ಕ್ರಿಕೆಟ್‌ನಿಂದ ಹೊರಗುಳಿಸಿದ್ದ ಭಾರತೀಯ ಆಟಗಾರರು ಹೊಸ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತಿದ್ದರೆ. ಅಕ್ಟೋಬರ್‌ನಲ್ಲಿ ಭಾರತದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿರುವ ವೆಸ್ಟ್ ಇಂಡೀಸ್ ಸಹ ಹೊಸ ಆರಂಭದ ಲೆಕ್ಕಾಚಾರದಲ್ಲಿದೆ.