——-ನಂಜುಂಡಪ್ಪ. ವಿ, ಹಿರಿಯ ಪತ್ರಕರ್ತರು——
ಬೆಂಗಳೂರು; ವಿಧಾನಮಂಡಲದ ಪ್ರತಿಪಕ್ಷ ನಾಯಕರು ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಇನ್ನೂ ಕಗ್ಗಂಟಾಗಿಯೇ ಮುಂದುವರೆದಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಡುವೆ ಕೊನೆಗೊಳ್ಳದ ಜಿದ್ದಾಜಿದ್ದಿಯಿಂದಾಗಿ ನೂತನ ನಾಯಕನ ಆಯ್ಕೆ ಮಾಡಲು ವಿಳಂಬವಾಗಿದೆ.

ಬಿ.ಎಲ್. ಸಂತೋಷ್ ಅವರು ಪಕ್ಷ ಮತ್ತು ಶಾಸಕಾಂಗವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಕಾರ್ಯತಂತ್ರ ಹಣೆದಿದ್ದರೆ, ಬಿ.ಎಸ್.ಯಡಿಯೂರಪ್ಪ ಮೊದಲು ಪಕ್ಷವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಕಾರ್ಯೋನ್ಮುಖರಾಗಿದ್ದಾರೆ. ಮತ್ತೊಂದೆಡೆ ವಿಧಾನಸಭಾ ಚುನಾವಣೆಯಲ್ಲಿ ಸೋಲಿಗೆ ಸಂತೋಷ್ ಕಾರಣ ಎಂಬ ಆರೋಪ ಮತ್ತು ವರದಿಗಳು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಎಚ್ಚರಿಕೆ ಹೆಜ್ಜೆ ಇಡಲು ನಿರ್ಧರಿಸಿದೆ. ಸಂತೋಷ್ ಅವರನ್ನು ಸಂಘದ ಚಟುವಟಿಕೆಯಲ್ಲಿ ತೊಡಗಿಸಿಕೊಂಡು, ಯಡಿಯೂರಪ್ಪ ಅವರ ಆಶಯದಂತೆ ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಲು ಉದ್ದೇಶಿಸಿದೆ ಎನ್ನಲಾಗಿದೆ.

ಬಿ.ಎಲ್. ಸಂತೋಷ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಆಪ್ತರಾದ ಸಿ.ಟಿ.ರವಿ ಅವರನ್ನು ತರಲು ಉದ್ದೇಶಿಸಿದ್ದು, ವಿಧಾನಸಭೆ ಪ್ರತಿಪಕ್ಷ ನಾಯಕರನ್ನಾಗಿ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರನ್ನು ನೇಮಿಸಲು ಒಲವು ತೋರಿದ್ದಾರೆ.

ಆದರೆ ಯಡಿಯೂರಪ್ಪ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಬಿಜೆಪಿ ರಾಜ್ಯಾದ್ಯಕ್ಷ ಸ್ಥಾನಕ್ಕೆ ನೇಮಿಸಿ, ಬಸವರಾಜ ಬೊಮ್ಮಾಯಿ ಅವರನ್ನು ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಮಾಡುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ. ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ತರುವಂತೆ ಒತ್ತಡ ಹೇರಿದ್ದಾರೆ.

ವಿಧಾನಪರಿಷತ್ತಿನ ವಿಪಕ್ಷ ನಾಯಕನ ಹುದ್ದೆಗೆ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ನೇಮಿಸಲು ಯಾರಿಗೂ ತಕರಾರಿಲ್ಲ. ಆದರೆ ಕೆ.ಎಸ್. ಈಶ್ವರಪ್ಪ ಅವರು ಮಾತ್ರ ಮೇಲ್ಮನೆ ವಿಪಕ್ಷ ನಾಯಕ ಕುರುಬ ಸಮುದಾಯದ ರಘುನಾಥರಾವ್ ಮಲ್ಕಾಪುರೆ ಅವರಿಗೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಆದರೆ ಹೈಕಮಾಂಡ್ ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಚ್ಚರಿಕೆ ಹೆಜ್ಜೆ ಇಡಲು ನಿರ್ಧರಿಸಿದೆ. ಪಕ್ಷ ಮತ್ತು ಶಾಸಕಾಂಗದಲ್ಲಿ ಜಾತಿ ಸಮೀಕರಣಕ್ಕೆ ಒತ್ತು ನೀಡಲು ಉದ್ದೇಶಿಸಿದೆ. ಪಕ್ಷದ ಅಧ್ಯಕ್ಷ ಸ್ಥಾನ ವಕ್ಕಲಿಗರಿಗೆ ನೀಡಿದರೆ ವಿಪಕ್ಷ ನಾಯಕನ ಸ್ಥಾನ ಲಿಂಗಾಯಿತರಿಗೆ, ಮೇಲ್ಮನೆ ವಿಪಕ್ಷ ನಾಯಕನ ಹುದ್ದೆಯನ್ನು ಹಿಂದುಳಿದ ಸಮುದಾಯಕ್ಕೆ ನೀಡಿದರೆ ಸೂಕ್ತ ಎನ್ನುವ ನಿಲುವಿನಲ್ಲಿದೆ.

ಇದೀಗ ಯಡಿಯೂರಪ್ಪ ಅವರ ಸಲಹೆಯಂತೆ ಇತ್ತೀಚೆಗೆ ಶೋಭಾ ಕರಂದ್ಲಾಜೆ ಅವರನ್ನು ಕರೆಸಿಕೊಂಡು ಒಂದೂವರೆ ಗಂಟೆಗಳ ಕಾಲ ಬಿಜೆಪಿ ವರಿಷ್ಠರು ಮಾತುಕತೆ ನಡೆಸಿದ್ದು, ಉನ್ನತ ಜವಾಬ್ದಾರಿಗೆ ಸಿದ್ಧರಿರುವಂತೆ ಸೂಚಿಸಿದ್ದಾರೆ. ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಬಹಿರಂಗವಾಗಿ ಈ ಹಿಂದೆ ಘೋಷಿಸಿದ್ದ ಹಿನ್ನೆಲೆಯಲ್ಲಿ ಇದೀಗ ಬೊಮ್ಮಾಯಿ ಬದಲಾವಣೆ ಕಷ್ಟ ಎನ್ನುವ ಚರ್ಚೆಗಳು ಸಹ ನಡೆಯುತ್ತಿವೆ. ಯಡಿಯೂರಪ್ಪ ಸಲಹೆಯಂತೆ ಬೊಮ್ಮಾಯಿ ಅವರನ್ನೇ ವಿರೋಧ ಪಕ್ಷದ ನಾಯಕನನ್ನಾಗಿ ನೇಮಿಸುವುದು ಸೂಕ್ತ ಎಂಬ ಚಿಂತನೆಯಲ್ಲಿ ವರಿಷ್ಠರಿದ್ದಾರೆ. ಹಾಗೇನಾದರೂ ಆದರೆ ರಾಜ್ಯದಲ್ಲಿ ಯಡಿಯೂರಪ್ಪ ಅವರ ಕೈ ಬಲವರ್ಧನೆಯಾಗಲಿದೆ.

ಈ ಮಧ್ಯೆ ಮುಂಬರುವ ದಿನಗಳಲ್ಲಿ ಬಿ.ಎಲ್. ಸಂತೋಷ್ ಅವರಿಗೆ ಯಾವ ಹುದ್ದೆ ನೀಡಬೇಕು ಎಂಬ ಕುರಿತು ಆರ್.ಎಸ್.ಎಸ್ ನ ಅಖಿಲ ಭಾರತ ಸರಕಾರ್ಯನಿರ್ವಾಹಕ ಮುಖಂಡ ದತ್ತಾತ್ರೆಯ ಹೊಸಬಾಳೆ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಮುಂಬರುವ ದಿನಗಳಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ ಆಗಮಿಸುವವರು ಪಕ್ಷವನ್ನು ಒಗ್ಗಟ್ಟಿನಿಂದ ಕರೆದುಕೊಂಡು ಹೋಗಬೇಕು. ಗುಂಪುಗಾರಿಕೆಗೆ ಅವಕಾಶ ನೀಡಬಾರದು ಎಂದು ಸಹ ವರಿಷ್ಠರು ಹೊಸಬಾಳೆ ಅವರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಇದರ ಜೊತೆಗೆ ಪಕ್ಷ ಸಂಘಟನೆ ಹಾಗೂ ವಿಧಾನಸಭೆ ಮತ್ತು ಪರಿಷತ್ತಿನ ಮುಖ್ಯ ಸಚೇತಕರ ಹುದ್ದೆಗಳನ್ನು ಸೂಕ್ತ ರೀತಿಯಲ್ಲಿ ವಿವಿಧ ಜಾತಿ ಸಮುದಾಯಗಳಿಗೆ ಹಂಚಿಕೆ ಮಾಡಲು ಉದ್ದೇಶಿಸಿದೆ. ವಿಧಾನಸಭೆ ಸೋಲಿನ ನಂತರ ಉಂಟಾಗಿರುವ ಆಘಾತದಿಂದ ಹೊರ ಬಂದು ಪಕ್ಷವನ್ನು ಮತ್ತೆ ಹಳಿಗೆ ತರಲು ಹೈಕಮಾಂಡ್ ಸೂಕ್ತ ಕಾರ್ಯತಂತ್ರದಲ್ಲಿ ನಿರತವಾಗಿದೆ.