ನವದೆಹಲಿ : ದೆಹಲಿಯಲ್ಲಿ ಯಮುನಾ ನದಿ ನೀರಿನ ಮಟ್ಟ ನಿರಂತರವಾಗಿ ಏರಿಕೆ ಕಾಣುತ್ತಿದ್ದು, ಜನಜೀವನ ಸಂಪೂರ್ಣವಾಗಿ ಆಸ್ತವ್ಯಸ್ಥಗೊಂಡಿದೆ ಆಗ್ನೇಯ, ಮಧ್ಯದೆಹಲಿಯ ಹಲವು ಪ್ರದೇಶಗಳು ನೀರಿನಿಂದ ತುಂಬಿದ್ದು, ದೆಹಲಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರವಾಹದಿಂದ ಯಮುನಾ ನದಿಯ ಮುಳುಗಡೆ ಪ್ರದೇಶದಲ್ಲಿ ವಾಸಿಸುವ ಲಕ್ಷಾಂತರ ಜನರ ಜೀವನ ದುಸ್ಥರವಾಗಿದೆ. ಈ ಭಾಗಗಳಲ್ಲಿ ರಸ್ತೆಗಳಲ್ಲಿ ತಗ್ಗು ಪ್ರದೇಶದಲ್ಲಿ ನೀರು ನಿಂತಿದ್ದು, ಸಂಪೂರ್ಣವಾಗಿ ಜಲಾವೃತಗೊಂಡಿದೆ. ರಸ್ತೆಗಳಲ್ಲಿ ಸಂಚಾರ ಸಮಸ್ಯೆಯಾಗಿದೆ.

ಈ ಮಧ್ಯೆ ದೆಹಲಿಯ ಈಶಾನ್ಯ ಜಿಲ್ಲೆಯ ಮುಕುಂದಪುರದಲ್ಲಿ ಮಳೆ ನೀರಿನ ಸೆಳೆತಕ್ಕೆ ಸಿಲುಕಿ ಮೂವರು ಮಕ್ಕಳು ಮೃತಪಟ್ಟಿದ್ದಾರೆ.
ಮಳೆ ನೀರು ಸಂಗ್ರಹವಾದ ಸ್ಥಳದಲ್ಲಿ ಸ್ನಾನ ಮಾಡಲು ತೆರಳಿದಾಗ ಮೂವರು ಮಕ್ಕಳು ನೀರು ಪಾಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಮಕ್ಕಳು ಸುಮಾರು 12ರಿಂದ 15 ವರ್ಷ ವಯಸ್ಸಿನವರು ಎಂದು ಹೇಳಲಾಗುತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮುಕುಂದಪುರದ ಹೊಲವೊಂದರಲ್ಲಿ ನೀರು ತುಂಬಿತ್ತು. ಅಲ್ಲಿ ಮಕ್ಕಳು ಸ್ನಾನಕ್ಕೆಂದು ತೆರಳಿದಾಗ ತುಂಬಿದ್ದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮಕ್ಕಳನ್ನು ನೀರಿನಿಂದ ಹೊರತೆಗೆಯುವಾಗಲೇ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದೆಡೆ ಫಿರೋಜ್ ಷಾ ಕೋಟ್ಲಾ ಕೋಟೆ, ರಾಜ್ ಘಾಟ್, ಜಂತರ್ ಮಂತರ್, ಲೋಧಿ ಗಾರ್ಡನ್, ಕೆಂಪುಕೋಟೆ, ಜಾಮಾ ಮಸೀದಿ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಯಮುನಾ ನದಿ ನೀರು ಹರಿದುಬಂದಿದ್ದು, ಟ್ರಾಫಿಕ್ ಜಾಮ್ ನಿರ್ಮಾಣವಾಗಿದೆ.