ನಟ ಸುದೀಪ್, ನಿರ್ಮಾಪಕ ಎಂಎನ್ ಕುಮಾರ್ ನಡುವಿನ ಹಣದ ಜಟಾಪಟಿ ನಿಲ್ಲೋ ಲಕ್ಷಣ ಕಾಣ್ತಿಲ್ಲ. ಹಣದ ಆರೋಪ ಬೆನ್ನಲ್ಲೇ ಕೋರ್ಟ್ ಮೆಟ್ಟಿಲೇರಿದ ನಟ ಸುದೀಪ್ ನಡೆ ಕಂಡು ದಂಗಾದ ನಿರ್ಮಾಪಕ ಕುಮಾರ್ ಚಿತ್ರರಂಗದ ಹಿರಿಯರ ಮನೆ ಕದ ತಟ್ಟಿ ಸಹಾಯದ ಹಸ್ತ ಚಾಚಿದ್ದಾರೆ.
ಇಬ್ಬರ ನಡುವಿನ ವಿವಾದ ಕೋರ್ಟ್ ಮೆಟ್ಟಿಲೇರಿದ ನಂತರ ಸ್ಯಾಂಡಲ್ ವುಡ್ ನ ಹಿರಿಯ ಕಲಾವಿದರಾದ ರವಿಚಂದ್ರನ್ ಮತ್ತು ಶಿವರಾಜ್ ಕುಮಾರ್ ಅಂಗಳಕ್ಕೆ ವಿವಾದ ತಲುಪಿತ್ತು. ಅದರಂತೆ ನಿನ್ನೆ ತಡ ರಾತ್ರಿವರೆಗೂ ನಟ ರವಿಚಂದ್ರನ್ ಮನೆಯಲ್ಲಿ ಸಂಧಾನ ಸಭೆ ನಡೆಯಿತು. ಏಕಮತದ ನಿರ್ಣಯಕ್ಕೆ ಬರಲಾಗದ ಹಿನ್ನಲೆ ಇಂದು ಅಥವಾ ನಾಳೆ ಕೂಡ ಮಾತುಕತೆ ಮುಂದುವರಿಯುವ ಸಾಧ್ಯತೆ ಇದೆ. ಆದರೆ ರವಿಚಂದ್ರನ್ ಮನೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಶಿವ ರಾಜ್ ಕುಮಾರ್ ಗೈರಾಗಿದ್ದರು. ಈ ಬಗ್ಗೆ ಉತ್ತರಿಸಿದ ಅವರು, ರವಿ ಹೇಳಿಕೆಯೇ ನನ್ನ ಹೇಳಿಕೆ ಕೂಡ ಎಂದರು.

ಕಲಾವಿದರ ಸಂಘ ಇಲ್ಲ ಎಂಬ ಮಾತು ಹೆಚ್ಚು ಸದ್ದು ಮಾಡ್ತಿದೆ. ನೀವು ಫುಲ್ ಫಿಲ್ ಮಾಡ್ಬಹುದಾ..? ಎಂಬ ಪ್ರಶ್ನೆ ಗೆ ಮಾತನಾಡಿದ ನಟ ಶಿವಕುಮಾರ್,
ಸೀನಿಯಾರಿಟಿ ಬೇಕಾಗುತ್ತೆ. ಮಾರಲ್ ಥಾಟ್ ತುಂಬಾ ಬೇಕಾಗುತ್ತೆ. ನಾನು ಲೀಡರ್ ಆಗಲು ಇಚ್ಚಿಸಲ್ಲ. ಎಲ್ಲರ ಜೊತೆಗೆ ಹೋಗುವವನೇ ನಾಯಕ ಅಲ್ವೇ.. ಸುದೀಪ್ ಮತ್ತು ಕುಮಾರ್ ನಡುವೆ ಏನಾಗಿದೆ ಎಂದು ಗೊತ್ತಿಲ್ಲ. ಆದರೆ ರವಿ ಏನ್ ಮಾತಾಡ್ತಾರೋ ನನ್ನ ಅಭಿಪ್ರಾಯ ಕೂಡ ಅದೇ ಆಗಿರುತ್ತೆ. ಒಳ್ಳೆ ಬೆಳವಣಿಗೆ ಆಗ್ಬೇಕು ಅನ್ನೋದೇ ನನ್ನ ಮತ್ತು ರವಿ ದೃಷ್ಠಿ. ನಾವೆಲ್ಲಾ ಒಂದು ಕುಟುಂಬದವರು. ಕುಟುಂಬ ಅಂದಮೇಲೆ ಸಮಸ್ಯೆ ಬರುತ್ತೆ ಹೋಗುತ್ತೆ. ಅದು ತಾನಾಗೇ ಕ್ಲಿಯರ್ ಆಗುತ್ತೆ. ಅದಕ್ಕೆ ಸಮಯ ಬೇಕಾಗಬಹುದು. ಆಗ ಕ್ಲಿಯರ್ ಆಗುತ್ತೆ. ಕ್ಲಿಯರ್ ಆಗದೇ ಇರುವ ಸಮಸ್ಯೆ ಯಾವುದೂ ಇಲ್ಲ ಪ್ರಪಂಚದಲ್ಲಿ. ಮನಸು ಮಾಡಬೇಕಷ್ಟೇ. ಮನ್ಸು ಮಾಡಿದರೆ ಎಲ್ಲಾ ಸಮಸ್ಯೆ ಬಗೆಹರಿಯುತ್ತೆ ಎಂದು ತಿಳಿಸಿದರು.