HD Kumaraswamy Complains: ಒಂದು ಕೈಯ್ಯಲ್ಲಿ ಕೊಟ್ಟು, ಇನ್ನೊಂದು ಕೈಯ್ಯಲ್ಲಿ ಕಾಂಗ್ರೆಸ್ ಕಸಿದುಕೊಳ್ಳುತ್ತಿದೆ: ಹೆಚ್ ಡಿ ಕುಮಾರಸ್ವಾಮಿ ದೂರು

ಬೆಂಗಳೂರು: ಆಲ್ಕೋಹಾಲಾದರೇನು? ಹಾಲಾದರೇನು? ಖಜಾನೆ ತುಂಬಬೇಕಷ್ಟೇ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದದ್ದೇ ತಡ ಜನರ ಬದುಕೇ ಹಾಲಾಹಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ದೂರಿದರು.

ಬೆಲೆ ಏರಿಕೆ ಗ್ಯಾರಂಟಿ, ಜನರ ಬದುಕು ಹಾಲಾಹಲ ಎಂಬ ಹ್ಯಾಶ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ಗುಡುಗಿದ ಅವರು,ಆಲ್ಕೊಹಾಲಿನ ಬೆಲೆ ಏರಿಸಿದ ನಂತರ ರಾಜ್ಯ ಕಾಂಗ್ರೆಸ್ ಸರಕಾರ ಹಾಲಿನ ಬೆಲೆಯನ್ನೂ ಲೀಟರಿಗೆ ₹3 ಹೆಚ್ಚಿಸಿ ಶ್ರಮಜೀವಿಗಳ ಕಿಸೆಗೆ ಕನ್ನ ಕೊರೆದಿದೆ. ಒಂದು ಕೈಯ್ಯಲ್ಲಿ ಕೊಟ್ಟು, ಇನ್ನೊಂದು ಕೈಯ್ಯಲ್ಲಿ ಕಸಿದುಕೊಳ್ಳುತ್ತಿದೆ! ಸ್ವತಃ ತಾವೇ ಕಿವಿಯಲ್ಲಿ ಹೂವಿಟ್ಟುಕೊಂಡಿದ್ದ ಕಾಂಗ್ರೆಸ್ಸಿಗರು, ಜನರ ತಲೆಯ ಮೇಲೆ ಫ್ಲವರ್ ಪಾಟ್ ಇಡುತ್ತಿದ್ದಾರೆ ಎಂದು ಕುಟುಕಿದರು.

ಚುನಾವಣೆಗೆ ಮುನ್ನ ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ ಬಾಯಿಬಾಯಿ ಬಡಿದುಕೊಂಡಿತ್ತು.ದೊಡ್ಡ ಬಾನಗಡಿಯನ್ನೇ ಎಬ್ಬಿಸಿತ್ತು. ಅಧಿಕಾರಕ್ಕೆ ಬಂದೊಡನೆ ಬೆಲೆ ಏರಿಕೆಯ ಸರಣಿ ಶಾಕ್ ನೀಡುತ್ತಿದೆ. ಹೀಗಿದೆ ನೋಡಿ ಕೈ ಕರಾಮತ್ತು. ಅನ್ನಭಾಗ್ಯದ ಹಣವನ್ನು ಹಾಲು, ಆಲ್ಕೋಹಾಲಿನಿಂದಲೇ ವಸೂಲಿಗೆ ಇಳಿದಿರುವ ಕಾಂಗ್ರೆಸ್ ಕ್ಷುದ್ರ ವಿತ್ತನೀತಿಗೆ ಧಿಕ್ಕಾರ. ಆರಂಭದಲ್ಲಿಯೇ ವಿದ್ಯುತ್ ಶಾಕ್ ಕೊಟ್ಟಿದ್ದ ಸರಕಾರ, ಗೃಹಜ್ಯೋತಿಯನ್ನು ಜನರ ಪಾಲಿಗೆ ಸುಡುಜ್ಯೋತಿ ಮಾಡಿತ್ತು. ಏರಿದ ಬೆಲೆಗಳನ್ನು ಕೆಳಗಿಳಿಸಲು ಕೈಲಾಗದ ಈ ಸರಕಾರ, ವಿಧಾನ ಕಲಾಪ ಮುಗಿಯುತ್ತಿದ್ದಂತೆಯೇ ಜನತೆಗೆ ಹೊಸದಾಗಿ ಬೆಲೆ ಏರಿಕೆ ಗ್ಯಾರಂಟಿ, ಬೆಲೆಭಾಗ್ಯವನ್ನು ಕರುಣಿಸಿ ಕೈತೊಳೆದುಕೊಂಡಿದೆ ಎಂದು ದೂರಿದರು.

ಚುನಾವಣೆ ಪ್ರಣಾಳಿಕೆಯಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನದ ಭರವಸೆ ಕೊಟ್ಟಿದ್ದವರು ಎರಡೇ ತಿಂಗಳಲ್ಲಿ ಅದನ್ನು ಮರೆತೇ ಹೋಗಿದ್ದಾರೆ! ಹಸುಗಳ ಹಿಂಡಿ, ಬೂಸಾ ಬೆಲೆ ಇಳಿಕೆಗೂ ಯಾವ ಗ್ಯಾರಂಟಿಯೂ ಇಲ್ಲ. ಇವರಿಗೆ ಆಲ್ಕೋಹಾಲಾದರೇನು? ಹಾಲಾದರೇನು? ಖಜಾನೆ ತುಂಬಬೇಕಷ್ಟೇ. ಈಗ ಜನರ ಬದುಕೇ ಹಾಲಾಹಲವಾಗಿದೆ ಎಂದು ಟೀಕಿಸಿದರು.

More News

You cannot copy content of this page