ಮಣಿಪುರ.. ಸಧ್ಯ ದೇಶವನ್ನೇ ತಲೆ ತಗ್ಗಿಸಿ ನಿಲ್ಲಿಸುವ ಘಟನೆಗೆ ಸಾಕ್ಷಿಯಾದ ನೆಲ.. ಇಬ್ಬರು ಮಹಿಳೆಯರ ಮೇಲಿನ ಅಮಾನವೀಯ ಕೃತ್ಯಕ್ಕೆ ದೇಶ ವಿದೇಶಗಳಿಂದಲೂ ವಿರೋಧ ವ್ಯಕ್ತವಾಗ್ತಿದೆ. ಘಟನೆಗೆ ಕಾರಣರಾದ ರಕ್ಕಸರನ್ನ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಒಕ್ಕೊರಲಿನಿಂದ ಕೂಗು ಕೇಳಿ ಬಂದ ಬೆನ್ನಲ್ಲೇ ನನ್ನ ಊರು, ನನ್ನ ಜನ, ನನ್ನ ಪತ್ನಿಯನ್ನು ನಗ್ನ ಗೊಳಿಸಿ ಮೆರವಣಿಗೆ ಮಾಡಿದ ರಾಕ್ಷಸರ ವಿರುದ್ಧ ಕಠಿಣ ಶಿಕ್ಷೆ ಆಗಲೇ ಬೇಕು ಎಂದು ಯೋಧರೊಬ್ಬರು ಒತ್ತಾಯಿಸಿದ್ದಾರೆ.
ಬೆತ್ತಲೆಗೊಳಿಸಲಾದ ಇಬ್ಬರು ಮಹಿಳೆಯರ ಪೈಕಿ ಒಬ್ಬ ಮಹಿಳೆ ವೀರ ಯೋಧರೊಬ್ಬರ ಪತ್ನಿ. 1999ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಅಸ್ಸಾಂನ ರೆಜಿಮೆಂಟ್ನಲ್ಲಿ ಸುಬೇದಾರ್ ಆಗಿ ಸೇವೆ ಸಲ್ಲಿಸಿ ಸಧ್ಯ ನಿವೃತ್ತಿ ಹೊಂದಿದ್ದಾರೆ. ತಮ್ಮ ಪತ್ನಿ ಯನ್ನ ವಿವಸ್ತ್ರಗೊಳಿಸಿದ ದಿನದ ಆಘಾತಕಾರಿ ಘಟನೆ ಕುರಿತು ಖಾಸಗಿ ವಾಹಿನಿಗೆ ಮಾಹಿತಿ ನೀಡಿದ ಯೋಧ, ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಬೇಕೆಂದು ಒತ್ತಾಯಿಸಿದ್ದಾರೆ.

“ನನ್ನ ಊರು, ನನ್ನ ಮನೆ, ನನ್ನ ಪತ್ನಿಯನ್ನು ಕಾಪಾಡಿಕೊಳ್ಳಲು ಆಗಲಿಲ್ಲ”
ನಾನು ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ನನ್ನ ರಾಷ್ಟ್ರದ ರಕ್ಷಣೆ ಮಾಡಿದೆ. ಶ್ರೀಲಂಕಾದಲ್ಲಿ ಶಾಂತಿಪಾಲನ ಪಡೆಯಲ್ಲಿ ಕಾರ್ಯನಿರ್ವಹಿಸಿದೆ. ಈಗ ಸೇನೆಯಿಂದ ನಿವೃತ್ತಿ ಪಡೆದ ಬಳಿಕ ಮನೆಗೆ ಬಂದೆ. ಆದರೆ ನನ್ನ ಮನೆ ಇರುವ ಪ್ರದೇಶವು ಅತ್ಯಂತ ಘೋರ ಯುದ್ಧಭೂಮಿಯಂತೆ ಕಂಡಿತು. ನನ್ನ ಊರು, ನನ್ನ ಮನೆ, ನನ್ನ ಪತ್ನಿಯನ್ನು ಕಾಪಾಡಿಕೊಳ್ಳಲು ಆಗಲಿಲ್ಲ. ಇದು ನನಗೆ ತೀವ್ರ ನೋವನ್ನುಂಟು ಮಾಡಿದೆ ಎಂದು ಅಳಲನ್ನು ತೋಡಿಕೊಂಡರು.
“ಪೊಲೀಸರ ಮುಂದೆಯೇ ವಿವಸ್ತ್ರಗೊಳಿಸಿದರೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ…!”

ಮಣಿಪುರ ಗಲಭೆದಿನದ ಘಟನೆ ಕುರಿತು ಮಾಹಿತಿ ನೀಡಿದ ಅವರು, ಅಂದು ಮೇ 4. ದುಷ್ಕರ್ಮಿಗಳ ಗುಂಪು ಕೈಗಳಲ್ಲಿ ಆಯುಧಗಳನ್ನು ಹಿಡಿದುಕೊಂಡು ಏಕಾಏಕಿ ನಮ್ಮ ಊರಿಗೆ ನುಗ್ಗಿ ಬಿಟ್ಟಿತ್ತು. ಗುಂಪು ಗುಂಪಾಗಿ ಇಡೀ ಊರನ್ನು ಆವರಿಸಿಕೊಂಡರು. ತಪ್ಪಿಸಿಕೊಂಡು ಎಲ್ಲಿಯೂ ಓಡಿ ಹೋಗಲು ಆಗಲಿಲ್ಲ. ಪ್ರಾಣಿಗಳಂತೆ ನಮ್ಮ ಜನರ ಮೇಲೆ ಹಲ್ಲೆ ಮಾಡಿದರು. ಮನೆಗಳಿಗೆಲ್ಲ ಬೆಂಕಿ ಹಚ್ಚಿ, ಮಹಿಳೆಯರು, ಮಕ್ಕಳ ಮೇಲೆ ದಾಳಿ ಮಾಡಿದರು. ಇದೇ ವೇಳೆಯೇ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಊರಿನ ತುಂಬಾ ನಗ್ನವಾಗಿ ಮೆರವಣಿಗೆ ಮಾಡಿದರು. ಅವರು ನನ್ನ ಪತ್ನಿ ಮತ್ತು ಇತರರನ್ನು ಕರೆದೊಯ್ಯುವುದನ್ನು ನೋಡಿದೆ ಎಂದು ಗದ್ಗತಿರಾದರು.
ಆ ಗಲಭೆಯಲ್ಲಿ ತಡೆಯಲಾಗಲಿಲ್ಲ. ವಿವಸ್ತ್ರಗೊಳಿಸುವಾಗ ಪೊಲೀಸರು ಅದೇ ಸ್ಥಳದಲ್ಲಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಮನೆಗಳಿಗೆ ಬೆಂಕಿ ಹಚ್ಚಿ, ಮಹಿಳೆಯರನ್ನು ಅವಮಾನ ಮಾಡಿ, ಮೆರವಣಿಗೆ ಮಾಡಿದ ಹಾಗೂ ಹಲ್ಲೆ ಮಾಡಿದಂತಹ ದುಷ್ಟರಿಗೆ ಕಠಿಣ ಶಿಕ್ಷೆಯಾಗಲೇ ಬೇಕು ಎಂದು ಒತ್ತಾಯಿಸಿದ್ದಾರೆ.