ಚಿತ್ರದುರ್ಗ: ಚಿತ್ರದುರ್ಗದ ವಡ್ಡರಹಳ್ಳಿ ಮತ್ತು ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಕುಡಿದು ಮತಪಟ್ಟವರ ಸಂಖ್ಯೆ 3ಕ್ಕೇರಿದೆ. ಹಾಗೆಯೇ ಕಲುಷಿತ ನೀರು ಕುಡಿದು ಅಸ್ವಸ್ಥರಾದವರ ಸಂಖ್ಯೆ ಏರಿದ್ದು, 100 ರ ಗಡಿ ದಾಟಿದೆ.
ವಡ್ಡರಸಿದ್ದವ್ವನಹಳ್ಳಿಯ ಪ್ರವೀಣ್ ಎಂಬುವವರು ನಿನ್ನೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಅಸುನೀಗಿದ್ದ ಮಂಜುಳಾ ಎಂಬುವವರ ಅಂತ್ಯ ಸಂಸ್ಕಾರ ಮಾಡಲು ಪೋಷಕರು ನಿರಾಕರಿಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನೆಲೆಸಿತ್ತು. ಸೂಕ್ತ ರೀತಿಯ ಪರಿಹಾರ ನೀಡದ ಹೊರತು ಅಂತ್ಯ ಸಂಸ್ಕಾರ ಮಾಡುವುದಿಲ್ಲ ಎಂದು ಪೋಷಕರು ಬಿಗಿ ಪಟ್ಟು ಹಿಡಿದಿದ್ದರು.
ನಂತರ ಜಿಲ್ಲಾಧಿಕಾರಿ ದಿವ್ಯಾಪ್ರಭು ಮತ್ತು ಎಸ್ಪಿ ಪರಶುರಾಂ ಅವರು ಮೃತ ಮಂಜುಳಾ ಅವರ ನಿವಾಸಕ್ಕೆ ತೆರಳಿ, ಪೋಷಕರೊಂದಿಗೆ ಮಾತುಕತೆ ನಡೆಸಿ, ಅವರ ಮನವೊಲಿಸುವಲ್ಲಿ ಯಶಸ್ವಿಯಾದರು. ನಂತರ ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗಲಾಯಿತು.
ಘಟನೆಯ ವಿವಿರ ಪಡೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿ ಅವರಿಗೆ ಸೂಕ್ತ ತನಿಖೆಗೆ ಸೂಚನೆ ನೀಡಿದ್ದಾರೆ. ಆದ್ದರಿಂದ ನಾಲ್ವರು ಅಧಿಕಾರಿಗಳ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ತಿಳಿದುಬಂದಿದೆ. ಸಮಿತಿಯಲ್ಲಿ ನಗರಾಭಿವೃದ್ಧಿ ಯೋಜನಾ ನಿರ್ದೇಶಕರು, ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳು, ಪಂಚಾಯತ್ ರಾಜ್ ಅಧಿಕಾರಿಗಳು ಹಾಗೂ ನಗರಸಭೆ ಪೌರಾಯುಕ್ತರು ಇದ್ದಾರೆ.