ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಅಭೂತಪೂರ್ವ ದಾಖಲೆ ಬರೆಯುವ ಹೊಸ್ತಿಲಲ್ಲಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡದ ನಾಯಕನಾಗಿ ದೊಡ್ಡ ಯಶಸ್ಸು ಕಂಡಿರುವ ಹಾರ್ದಿಕ್, ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲೂ ತಂಡದ ಪ್ರಮುಖ ಅಸ್ತ್ರವಾಗಿದ್ದು, ಚುಟುಕು ಕ್ರಿಕೆಟ್‌ನಲ್ಲಿ ಹಲವು ಪಂದ್ಯಗಳಲ್ಲಿ ಟೀಂ ಇಂಡಿಯಾದ ಗೆಲುವಿನ ರೂವಾರಿಯಾಗಿ ಮಿಂಚಿದ್ದಾರೆ. ಇದರ ಪರಿಣಾಮ ಟಿ20 ಕ್ರಿಕೆಟ್‌ನಲ್ಲಿ 4000ಕ್ಕೂ ಅಧಿಕ ರನ್‌ಗಳಿಸಿದ ಹಾಗೂ 150ಕ್ಕೂ ಹೆಚ್ಚು ವಿಕೆಟ್‌ಗಳನ್ನ ಪಡೆದ ಭಾರತದ ಮೊದಲ ಆಟಗಾರ ಎಂಬ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಹಾರ್ದಿಕ್ ಪಾಂಡ್ಯ, ಈವರೆಗೂ 4348 ರನ್‌ಗಳಿಸಿದ್ದು, ಒಟ್ಟಾರೆ 148 ವಿಕೆಟ್‌ಗಳನ್ನ ಸಹ ಪಡೆದು ಮಿಂಚಿದ್ದಾರೆ. ಹೀಗಾಗಿ 150 ವಿಕೆಟ್‌ಗಳ ದಡಿದಾಟಲು ಕೇವಲ ಎರಡು ವಿಕೆಟ್‌ಗಳ ಅಗತ್ಯವಿದ್ದು, ಇದಕ್ಕಾಗಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಈ ದಾಖಲೆ ಬರೆಯುವ ನಿರೀಕ್ಷೆ ಹೊಂದಿದ್ದಾರೆ.

ಭಾರತದ ರಾಷ್ಟ್ರೀಯ ತಂಡದಲ್ಲಿ ಮಾತ್ರವಲ್ಲದೇ ಫ್ರಾಂಚೈಸಿ ಕ್ರಿಕೆಟ್‌ನಲ್ಲೂ ಸಹ ಹಾರ್ದಿಕ್ ಪಾಂಡ್ಯ, ದೊಡ್ಡಮಟ್ಟದ ಯಶಸ್ಸು ಕಂಡಿದ್ದಾರೆ. ಪ್ರಮುಖವಾಗಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿಯಲ್ಲಿ ಪಾಂಡ್ಯ ತಮ್ಮದೇ ಛಾಪು ಮೂಡಿಸಿದ್ದಾರೆ. ಹಲವು ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡದಲ್ಲಿ ಮಿಂಚಿದ್ದ ಸ್ಟಾರ್ ಆಲ್ರೌಂಡರ್, ಕಳೆದ ಎರಡು ಸೀಸನ್‌ಗಳಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ ಯಶಸ್ಸು ಕಂಡಿದ್ದಾರೆ. ಅಲ್ಲದೇ ತಂಡದ ನಾಯಕನಾಗಿ ಆಡಿದ ಚೊಚ್ಚಲ ಆವೃತ್ತಿಯಲ್ಲೇ ತಂಡಕ್ಕೆ ಪ್ರಶಸ್ತಿ ಗೆದ್ದುಕೊಟ್ಟ ಹೆಗ್ಗಳಿಕೆ ಸಹ ಪಾಂಡ್ಯ ಹೊಂದಿದ್ದಾರೆ.