ಈ ಹಿಂದೆ ಕಣ್ಣುಹೊಡೆದು ಭಾರೀ ಸುದ್ದಿಯಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇಂದು ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಭಾರೀ ಟೀಕೆಗೆ ಗುರಿಯಾಗಿದೆ.
ಸ್ಮೃತಿ ಇರಾನಿ ಸದನದಲ್ಲಿ ಮಾತಾಡುವ ವೇಳೆ ಮಹಿಳಾ ಸಂಸದೆರತ್ತ ನೋಡಿ ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಸ್ಪೀಕರ್ ಓಂ ಬಿರ್ಲಾ ಅವರಿಗೆ, ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ 21 ಮಂದಿ ಮಹಿಳಾ ಸಂಸದರು ಲಿಖಿತ ದೂರು ನೀಡಿದ್ದು, ರಾಹುಲ್ ಗಾಂಧಿಯ ನಡವಳಿಕೆಯನ್ನು ‘ಅನುಚಿತ’ ಎಂದು ಬರೆದ ಪತ್ರಕ್ಕೆ ಹಲವು ಮಹಿಳಾ ಸಂಸದೆಯರು ಸಹಿ ಹಾಕಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಸಂಸದೆ ಶೋಭಾ ಕರಂದ್ಲಾಜೆ, ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ಮಹಿಳಾ ಸಂಸದರು ಸ್ಪೀಕರ್ ಗೆ ದೂರು ನೀಡಿದ್ದೇವೆ. ಸಿಸಿಟಿವಿ ಮತ್ತು ವಿಡಿಯೋಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದೇವೆ. ಎಂಥ ನಾಯಕ ಈತ. ಮಹಿಳಾ ಸಂಸದರು ಇರುವ ಕಡೆ ಈ ರೀತಿ ಮಾಡಿದ್ದಾರೆ . ಎಂಥ ಸಂಸ್ಕೃತಿ ಇದು ಎಂದು ಶೋಭಾ ಕರಂದ್ಲಾಜೆ ದೂರಿದರು.
ರಾಹುಲ್ ಗಾಂಧಿ ವಿರುದ್ಧ ಗುಡುಗಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಸ್ತ್ರೀದ್ವೇಷದ ಪುರುಷ ಮಾತ್ರ ಸಂಸತ್ತಿನಲ್ಲಿ ಮಹಿಳಾ ಸಂಸದೆಯರಿಗೆ ಫ್ಲೈಯಿಂಗ್ ಕಿಸ್ ನೀಡಲು ಸಾಧ್ಯ ಎಂದು ಗುಡುಗಿದ್ದಾರೆ. ಇಂತಹ ಉದಾಹರಣೆ ಹಿಂದೆಂದೂ ಕಂಡಿರಲಿಲ್ಲ. ಇದು ಅವರ ಮಾನಸಿಕತೆ ತೋರಿಸುತ್ತದೆ. ಇದು ಅಶ್ಲೀಲ ಪ್ರಕರಣ ಎಂದು ವಾಗ್ದಾಳಿ ನಡೆಸಿದರು.