Quit India Movement Anniversary: ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ಖುದ್ದಾಗಿ ತೆರಳಿ ಗೌರವ ಸಲ್ಲಿಸಿದ ರಾಜ್ಯಪಾಲರು

ಬೆಂಗಳೂರು: ಕ್ವಿಟ್ ಇಂಡಿಯಾ ಚಳುವಳಿ ವರ್ಷಾಚರಣೆ ಅಂಗವಾಗಿ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಮಹೋತ್ಸವದ ಪ್ರಯುಕ್ತ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಬುಧವಾರ ಬೆಂಗಳೂರಿನಲ್ಲಿರುವ ಐವರು ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ಖುದ್ದಾಗಿ ತೆರಳಿ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿ, ಸಿಹಿ ನೀಡುವ ಮೂಲಕ ಗೌರವ ಸಲ್ಲಿಸಿದ್ದು, ಈ ವಿಶೇಷ ಕ್ಷಣಗಳಿಗೆ ಜಿಲ್ಲಾಧಿಕಾರಿ ದಯಾನಂದ್ ಸಾಕ್ಷಿಯಾದರು.

ಬುಧವಾರ ಬೆಳಿಗ್ಗೆ ಮೊದಲಿಗೆ ಬಸವನಗುಡಿಯಲ್ಲಿರುವ ಶ್ರೀ ಸಾಯಿ ವ್ರೃದ್ದಾಶ್ರಮದಲ್ಲಿ ವಾಸಿಸುತ್ತಿರುವ ಶ್ರೀಮತಿ ಶಕುಂತಲ ಅವರನ್ನು ರಾಜ್ಯಪಾಲರು ಭೇಟಿ ಮಾಡಿ, ಸನ್ಮಾನಿಸಿ, ಪ್ರಮಾಣ ಪತ್ರ, ಸಿಹಿ ನೀಡಿ ನಮನ ಸಲ್ಲಿಸಿದರು.

ನಂತರ ಯಲಚೇನಹಳ್ಳಿಯ ನಂಜಪ್ಪ ಲೇಔಟ್ ನಲ್ಲಿರುವ ಸ್ವಾತಂತ್ರ ಹೋರಾಟಗಾರರಾದ ಎಸ್ ವಿ ಟಿ ಗುಪ್ತಾ ಅವರ ಮನೆಗೆ ತೆರಳಿ ಅವರನ್ನು ಸನ್ಮಾನಿಸಿ, ಪ್ರಮಾಣ ಪತ್ರ ನೀಡಿದರು.

ತದ ನಂತರ ಬನಶಂಕರಿ 3ನೇ ಹಂತದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಶಂಕರನಾರಾಯಣ ರಾವ್ ಅವರ ಮನೆಗೆ ತೆರಳಿ ಅವರನ್ನು ಸನ್ಮಾನಿಸಿ, ಸಿಹಿ ತಿನಿಸಿದರು. ಅವರ ಕುಶಲೋಪರಿ ವಿಚಾರಿಸಿದ ರಾಜ್ಯಪಾಲರು, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ತಮಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಮಲ್ಲೇಶ್ವಂರಂನಲ್ಲಿರುವ ಶ್ರೀ ನಾಗಭೂಷಣ್ ರಾವ್ ಅವರ ಮನೆಗೆ ತೆರಳಿದ ಗೌರವಾನ್ವಿತ ರಾಜ್ಯಪಾಲರು, ಶ್ರೀ ನಾಗಭೂಷಣ್ ರಾವ್ ಅವರನ್ನು ಸನ್ಮಾನಿಸಿ, ಕುಶಲೋಪರಿ ವಿಚಾರಿಸಿದರು. ರಾಜ್ಯಪಾಲರು “ತಮ್ಮ ದೇಶ ಸೇವೆ ನಮ್ಮೆಲ್ಲರಿಗೆ ಸ್ಫೂರ್ತಿ. ನಿಮಗೆ ಹಾಗೂ ನಿಮ್ಮ ಕುಟುಂಬಗಳಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿ ತಲೆಬಾಗಿ ನಮಿಸಿದರು.

ಭೂಪಸಂದ್ರದ ವಿನಾಯಕ ಲೌಔಟ್ ನಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಕೆ ಸಿ ನಾರಾಯಣಪ್ಪ ಅವರನ್ನು ಭೇಟಿ ಮಾಡಿ, ಸನ್ಮಾಸಿದರು.

ಈ ವೇಳೆ ಜಿಲ್ಲಾಧಿಕಾರಿ ದಯಾನಂದ್ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.

More News

You cannot copy content of this page