ಹುಬ್ಬಳ್ಳಿ: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಚಾರ ಗಿಟ್ಟಿಸಿಕೊಳ್ಳೋದು ಬಿಟ್ಟು ದೇಶಕ್ಕೆ ಲಾಭವಾಗುವ ಯಾವುದೇ ಸಾಧನೆ ಮಾಡಿಲ್ಲ. ಬದಲಾಗಿ ಸಾರ್ವಜನಿಕರ ಹಣದಲ್ಲಿ ಶೋಕಿ ಮಾಡುತ್ತಿದ್ದಾರೆ ಎಂದು ಕಾರ್ಮಿಕ ಸಚಿವರಾದ ಸಚಿವ ಸಂತೋಷ ಲಾಡ್ ಕಿಡಿಕಾರಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವರು 10 ವರ್ಷ ಆಯ್ತು ಲೋಕ್ ಪಾಲ್ ಬಗ್ಗೆ ಪಾರ್ಲಿಮೆಂಟ್ ನಲ್ಲಿ ಮಾತನಾಡುತ್ತಿಲ್ಲ. ಆದರೆ ಕಾಂಗ್ರೆಸ್ ಪಕ್ಷದ ಬಗ್ಗೆ ಬಹಳ ಮಾತನಾಡುತ್ತಿದ್ದಾರೆ. ಈಗಾಗಲೇ ಕ್ಯಾಗ್ ರಿಪೋರ್ಟ್ ಬಂದಾಗಿದೆ. ಈಗಿರುವ ಕ್ಯಾಗ್ಸ್ ರಿಪೋರ್ಟಿನಲ್ಲಿ ಆಯಕಟ್ಟಿನ 6 ಜಾಗದಲ್ಲಿ ದೊಡ್ಡ ಮಟ್ಟದ ಬ್ರಷ್ಟಾಚಾರ ಆಗಿದೆ. ಅದನ್ನು ಪ್ರಶ್ನಿಸಿದವರನ್ನು ವಿವಿಧ ತನಿಖಾ ಸಂಸ್ಥೆಗಳ ಮುಖಾಂತರ ನಿಯಂತ್ರಿಸಲಾಗುತ್ತಿದೆ. ಹೀಗಾಗಿ ದೇಶ ಪ್ರಜಾಪ್ರಭುತ್ವದ ಮಾರ್ಗದಲ್ಲಿ ನಡೆಯುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಇಂದಿರಾ ಗಾಂಧಿ, ಮನಮೋಹನ ಸಿಂಗ್ ಸೇರಿದಂತೆ ಹಲವರ ಕಾಲದಲ್ಲಿ ಆಗಿರುವ ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ದಿಮೆಗಳು, ಸಂಸ್ಥೆಗಳು ಹೆಚ್ಚು ಮಾರಾಟ ಆಗಿರೋದು ಬಿಜೆಪಿಯವರ ಕಾಲದಲ್ಲಿ ಎಂಬುದು ಇತಿಹಾಸವೇ ಸಾರಿ ಹೇಳುತ್ತಿದೆ. ಚುನಾವಣೆಗಳು ಇರಲಿ ಬಿಡಲಿ ಸಾರ್ವಜನಿಕರ ದುಡ್ಡಿನಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳೋದನ್ನ ಬಿಟ್ರೆ ಪ್ರಧಾನಿ ನರೇಂದ್ರ ಮೋದಿ ಕಳೆದ 10 ವರ್ಷದಲ್ಲಿ ದೇಶಕ್ಕೆ ಲಾಭ ಮಾಡುವ ಯಾವುದೇ ಕಾರ್ಯಕ್ರಮ ಜಾರಿಗೊಳಿಸಲೇ ಇಲ್ಲ. ಈಗ ಮತ್ತೆ ಚುನಾವಣೆಗಳು ಹತ್ತಿರವಾಗುತ್ತಿವೆ. ಗಿಮಿಕ್ ರಾಜಕಾರಣ ಮತ್ತೆ ಆರಂಭಿಸಲಾಗಿದೆ. ಸಾವಿರಾರು ಕೋಟಿ ಸರ್ಕಾರದ ದುಡ್ಡು ಖರ್ಚು ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳೋದು ಅವರ ತಂತ್ರ. ಮುಂದಿನ ದಿನಗಳಲ್ಲಿ ಯಾರು ಸರಿ, ಯಾರು ತಪ್ಪು ಅಂತ ಜನ ಪಾಠ ಕಲಿಸ್ತಾರೆ ಎಂದು ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುಧ್ಧ ಹರಿಹಾಯ್ದರು.

ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರು ನಮಗೆ ಭ್ರಷ್ಟಾಚಾರಿಗಳು ಅಂತಾರೆ. ಅನಿಲ್ ಅಂಬಾನಿ ಅವರು ಒಂದು ಸೈಕಲ್ಲನ್ನೂ ತಯಾರಿಸಿಲ್ಲ. ಅವರಿಗೆ ಹೆಲಿಕಾಪ್ಟರ್ ತಯಾರಿ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾರೆ. ಇದು ಯಾವ ಧರ್ಮ ಎಂದು ಪ್ರಶ್ನಿಸಿದ ಸಚಿವ ಸಂತೋಷ್ ಲಾಡ್, ಅನುಭವ ಇಲ್ಲದ ಕಂಪನಿಗೆ, ಫ್ರಾನ್ಸ್ ಮೂಲದ ಕಂಪನಿಗೆ ನೇರವಾಗಿ ಕಾಂಟ್ರಾಕ್ಟ್ ಕೊಡ್ತೀರಿ ಅಂದ್ರೆ, ಇದು ನೇರ ಭ್ರಷ್ಟಾಚಾರ ತಾನೇ? ಎಂದು ಪ್ರಶ್ನೆ ಮಾಡಿದರು.