We hit a Century: ಸರ್ಕಾರ ಸೆಂಚುರಿ ಬಾರಿಸಿ ಮುನ್ನುಗ್ಗಿದೆ, ಕೆಲಸ ಜನರ ಕಣ್ಣಿಗೆ ಕಾಣುತ್ತಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಸರ್ಕಾರದ ನೂರು ದಿನಗಳ ಕೆಲಸ ರಾಜ್ಯದ ಜನರ ಕಣ್ಣಿಗೆ ಕಾಣುತ್ತಿದೆ. ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ, ಸೆಂಚುರಿ ಬಾರಿಸಿ ಮುನ್ನುಗ್ಗುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳು ರಾಜ್ಯ ಸರ್ಕಾರಕ್ಕೆ ನೂರು ದಿನಗಳು ಪೂರ್ಣಗೊಂಡಿರುವ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಉತ್ತರಿಸಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;

“ನಮ್ಮ ಸರ್ಕಾರ ನೂರು ದಿನಗಳಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರು ರಾಜ್ಯದೆಲ್ಲೆಡೆ ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ 1.10 ಕೋಟಿ ಮನೆ ಯಜಮಾನಿಯರಿಗೆ ಆ. 30 ರಿಂದ ಪ್ರತಿ ತಿಂಗಳು 2 ಸಾವಿರ ರೂ. ಹಣ ತಲುಪಲಿದೆ. 1.36 ಲಕ್ಷ ಜನರಿಗೆ ಉಚಿತ ಅಕ್ಕಿ ತಲುಪುತ್ತಿದೆ. 1.41 ಕೋಟಿ ಗ್ರಾಹಕರಿಗೆ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ಸಿಗುತ್ತಿದೆ. ಡಿಸೆಂಬರ್ ವೇಳೆಗೆ ನಿರುದ್ಯೋಗಿ ಯುವಕರಿಗೆ ಭತ್ಯೆ ಯೋಜನೆ ಜಾರಿ ಮಾಡುತ್ತೇವೆ.

ಇದು ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ. ನಾವು ಕೊಟ್ಟ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಿದ್ದು, ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಯಾವ ಸರ್ಕಾರ ಇಷ್ಟು ಕೆಲಸ ಮಾಡಿದೆ ಹೇಳಿ?”

ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ:

ಸಚಿವ ಪ್ರಿಯಾಂಕ್ ಖರ್ಗೆ ಅವರ ಭೇಟಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, “ಪ್ರಿಯಾಂಕ್ ಖರ್ಗೆ ಅವರ ಜತೆ ನಮ್ಮ ಪಕ್ಷದ ಪ್ರಣಾಳಿಕೆ ಹಾಗೂ ಇತರೆ ವಿಚಾರವಾಗಿ ಚರ್ಚೆ ಮಾಡಿದ್ದೇನೆ. ಎನ್ ಆರ್ ಐ ವಿಚಾರ, ಬೆಂಗಳೂರಿನಲ್ಲಿ ಉಚಿತ ವೈ-ಫೈ ವಲಯ ನಿರ್ಮಾಣ ಸಂಬಂಧ ಸಭೆಯ ದಿನಾಂಕ ಪ್ರಕಟಿಸುತ್ತೇವೆ” ಎಂದು ತಿಳಿಸಿದರು.

ಸುಳ್ಳು ಸುದ್ದಿ ನಿಯಂತ್ರಣ ವಿಚಾರವಾಗಿ ಕೇಳಿದ ಪ್ರಶ್ನೆಗೆ, “ಸುಳ್ಳು ಸುದ್ದಿ ಹರಡುವವರನ್ನು ನಿಯಂತ್ರಿಸಲು ಗೃಹ ಇಲಾಖೆ, ಐಟಿ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ. ಸುಳ್ಳು ಸುದ್ದಿಯಿಂದ ಕೋಮುಗಲಭೆ, ಗದ್ದಲ, ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಇವುಗಳನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

More News

You cannot copy content of this page