ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುತ್ತೇನೆಂದು ನಂಬಿಸಿ ಬಹುಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ಹಿಂದೂಪರ ನಾಯಕಿ ಚೈತ್ರಾ ಕುಂದಾಪುರ ಪ್ರಕರಣ ಇಂದು ಬೇರೆ ರೀತಿಯಲ್ಲಿ ಟ್ವಿಸ್ಟ್ ಪಡೆದುಕೊಂಡಿದೆ.
ನಿನ್ನೆ ಅಷ್ಟೇ ಬಂಧನಕ್ಕೊಳಗಾದ “ಹಿಂದೂಪರ ಫೈರ್ ಬ್ರ್ಯಾಂಡ್” ಚೈತ್ರಾ ಕುಂದಾಪುರ ಅವ್ರನ್ನು ರಾತ್ರಿ ಬೆಂಗಳೂರಿನ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು. 10 ದಿನಗಳ ಕಾಲ ಕಸ್ಟಡಿಗೆ ಪಡೆದಿರುವ ಸಿಸಿಬಿ ಪೊಲೀಸರು, ವಿಚಾರಣೆ ಎಂದು ಕರೆ ತರುವ ವೇಳೆ ಚೈತ್ರಾ ಸ್ಫೋಟ ಕ ಮಾಹಿತಿ ನೀಡಿದ್ದಾರೆ.

ಪೊಲೀಸ್ ಕಛೇರಿ ಒಳ ಹೋಗುವ ಮುನ್ನ ಮಾಧ್ಯಮಗಳಿಗೆ ಮಾತನಾಡಿದ ಚೈತ್ರ, ಮೊದಲು ಈ ಪ್ರಕರಣದಲ್ಲಿ ಸ್ವಾಮೀಜಿಗಳು ಸಿಕ್ಕಿ ಹಾಕಿಕೊಳ್ಳಲಿ. ಎಲ್ಲಾ ಸತ್ಯ ಗೊತ್ತಾಗುತ್ತೆ ಸರ್. ಸ್ವಾಮೀಜಿ ಸಿಕ್ಕಿ ಹಾಕಿಕೊಂಡ ನಂತರ ದೊಡ್ಡ ದೊಡ್ಡವರ ಹೆಸರುಗಳು ಹೊರ ಬರುತ್ತವೆ. ಇಂದಿರಾ ಕ್ಯಾಂಟೀನ್ ಬಿಲ್ ಪೆಡ್ಡಿಂಗ್ ಇರೋ ಕಾರಣ ಈ ಷಡ್ಯಂತ್ರ ರಚನೆಯಾಗಿದೆ. ಎ1 ಆರೋಪಿ ನಾನೇ ಆಗಿರಬಹುದು. ಸ್ವಾಮೀಜಿ ಸಿಕ್ಕ ನಂತರವೇ ಎಲ್ಲವೂ ಗೊತ್ತಾಗಲಿದೆ ಎಂದಿದ್ದು, ಭಾರೀ ಚರ್ಚೆಗೆ ಈಡಾಡ್ತಿದೆ.
ಅಂದ್ಹಾಗೆ, ಉದ್ಯಮಿ ಗೋವಿಂದ ಬಾಬು ಚೆಫ್ ಟ್ಯಾಕ್ ಎಂಬ ಕಂಪನಿ ನಡೆಸ್ತಿದ್ದಾರೆ. ಇದರ ಜೊತೆಗೆ 98 ಇಂದಿರಾ ಕ್ಯಾಂಟೀನ್ ಗುತ್ತಿಗೆಯನ್ನ ಗೋವಿಂದ ಬಾಬು ಹೊಂದಿದ್ದಾರೆ. 2017 ರಿಂದಲೂ ಇಂದಿರಾ ಕ್ಯಾಂಟೀನ್ ನ್ನ ಗೋವಿಂದ ಬಾಬು ನಡೆಸ್ತಿದ್ದಾರೆ. ಗೋವಿಂದಬಾಬುವಿಗೆ ಅಂದಾಜು 35 ಕೋಟಿ ರೂಪಾಯಿ ಬರಬೇಕಿತ್ತಂತೆ. ಹೀಗಾಗಿ ಕ್ಯಾಂಟೀನ್ ಹಣಕ್ಕೆ ಪ್ಲ್ಯಾನ್ ಮಾಡಿದ್ದಾರೆ ಎಂದು ಚೈತ್ರಾ ಕುಂದಾಪುರ ಆರೋಪ ಮಾಡ್ತಿದ್ದಾರೆ.

ಇದಕ್ಕೆ ಪ್ರತ್ಯುತ್ತರ ನೀಡದ ಉದ್ಯಮಿ ಗೋವಿಂದ ಬಾಬು, ಪ್ರಕರಣ ದಲ್ಲಿ ದೊಡ್ಡ ದೊಡ್ಡವರು ಯಾರೂ ಇಲ್ಲ. ಎಲ್ಲಾ ಪ್ಲ್ಯಾನ್ ಮಾಡಿರೋದೇ ಚೈತ್ರಾ ಕುಂದಾಪುರ. ಇಂದಿರಾ ಕ್ಯಾಂಟೀನ್ ಬೇರೆ ವಿಷಯ.. ಅದು ನನ್ನ ಉದ್ಯಮ. 30 ಕೋಟಿ ಇರಲಿ, 20 ಕೋಟಿ ಇರಲಿ. ಸರ್ವಿಸ್ ಕೊಟ್ಟಿದ್ದೇವೆ. ಬಿಬಿಎಂಪಿ ಜೊತೆಗೆ ಮಾತನಾಡ್ತೇವೆ. ಆದ್ರೆ ಚೈತ್ರಾ ಕುಂದಾಪುರ ಸಂಘದ ಸಿದ್ದಾಂತ, ಹೆಸರು ಬಳಸಿ ಮೋಸ ಮಾಡಿದ್ದಾರೆ. ಗಗನ್ ಸ್ವಾಮೀಜಿ ಸೇರಿ 5 ಕೋಟಿ ರೂಪಾಯಿ ಯನ್ನ ಕೊಟ್ಟಿದ್ದೇನೆ ಎಂದಿದ್ದು, ಸತ್ಯಾಸತ್ಯತೆ ಹೊರ ಬರಬೇಕಷ್ಟೇ.