ಬೆಂಗಳೂರು : ನಾಲ್ಕು ತಿಂಗಳು ಕಳೆದಕೂ ಕೂಡ ಬಿಜೆಪಿಗೆ ಇನ್ನೂ ವಿಪಕ್ಷ ನಾಯಕನ ಆಯ್ಕೆ ಮಾಡಲು ಸಾಧ್ಯವಾಗಿಲ್ಲ, ಇದೀಗ ಜೆಡಿಎಸ್ ಜೊತೆ ಹೋಗುತ್ತಿದ್ದಾರೆ, ಬಿಜೆಪಿ, ಜೆಡಿಎಸ್ ರಾಜ್ಯದಲ್ಲಿ ಅಸ್ಥಿತ್ವ ಕಳೆದುಕೊಳ್ಳುತ್ತಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಕ್ ಗಳ ಮುಂದೆ ಮಾತನಾಡುವ ಭರದಲ್ಲಿ ಕಾಂಗ್ರೆಸ್ ಅಸ್ಥಿತ್ವ ಕಳೆದುಕೊಂಡಿದೆ ಎಂದರು. ನಂತರ ಪಕ್ಕದಲ್ಲಿದ್ದವರು ಎಚ್ಚರಿಸಿದ ಬಳಿಕ ಬಿಜೆಪಿ, ಜೆಡಿಎಸ್ ಅಸ್ತಿತ್ವ ಕಳೆದುಕೊಂಡಿದೆ ಎಂದು ಸಮಜಾಯಿಸಿ ನೀಡಿದರು.
ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರ
ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಕುಮಾರಸ್ವಾಮಿ ಬಗ್ಗೆ ನಮ್ಮ ಬ್ರದರ್ ಅಂತ ವ್ಯಂಗ್ಯವಾಡಿದ ಅವರು, ಸ್ವಲ್ಪ ದಿನ ಕಾದು ನೋಡಿ ಏನಾಗಲಿದೆ ಅಂತ. ಬಿಜೆಪಿ ಮತ್ತು ಜೆಡಿಎಸ್ ಎರಡೂ ಕಡೆಯಿಂದ ಅಸಮಾಧಾನ ಸ್ಪೋಟವಾಗಲಿದೆ ಎಂದು ಭವಿಷ್ಯ ನುಡಿದರು.

ಎರಡೂ ಕಡೆ ಶಾಸಕರು ರಾಗ ತೆಗೆದಿದ್ದಾರೆ. ಇನ್ನೂ ಕೆಲ ಕಾಲ ನೋಡೋಣ. ಬಹಳ ಸ್ಪೀಡ್ ಆಗಿರೋದು ನಮ್ಮ ಬ್ರದರ್.! ಎರಡು ಬಾರಿ ಸಿಎಂ ಮಾಡಿದಾಗಲೇ ಪಕ್ಷದ ಅಸ್ಥಿತ್ವ ಉಳಿಸಿಕೊಳ್ಳಲು ಆಗಲಿಲ್ಲ. ಈಗ ಪಕ್ಷ ಉಳಿಸಿಕೊಳ್ಳೋ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬ್ರದರ್ ಮತ್ತು ಬೊಮ್ಮಾಯಿ ಇಬ್ಬರೇ ಮೈತ್ರಿಯಾಗಲಿ ಅಂತ ಮಾತನಾಡುತ್ತಿರೋದು, ಯಡಿಯೂರಪ್ಪ ಮಾತ್ರ ನೋಡೋಣ ಏನಾಗಲಿದೆ ಅಂತಿದ್ದಾರೆ. ಯೋಗೇಶ್ವರ್ ಕೂಡ ಮೈತ್ರಿಯಾಗಲಿ ಎನ್ನುತ್ತಿದ್ದಾರೆ, ಅವರಿಗೆ ಯೋಗೇಶ್ವರ್‌ಗೂ ಈಗ ಮೈತ್ರಿ ಅನಿವಾರ್ಯ ಎಂದರು.
ಸಿಎಂ ಬರ ಗ್ಯಾರಂಟಿಗೆ ಪ್ರತಿಕ್ರಿಯೆ
ಬಿಜೆಪಿ ಟ್ವೀಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಚಿತ್ರವನ್ನು ಬರ ಮೂಡಿಸಿರೋ ರೀತಿ ಚಿತ್ರೀಕರಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಗೆ ಭಯ ಕಾಡುತ್ತಿದೆ. ಪಾರ್ಲಿಮೆಂಟ್ ಚುನಾವಣೆ ಎದುರಿಸಲು ಅವರಿಂದ ಆಗುತ್ತಿಲ್ಲ, ಇದೀಗ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ ಎಂದು ಸಿಎಂ ಪರ ಬ್ಯಾಟಿಂಗ್ ಮಾಡಿದರು.

ಬರಗಾಲ ಯಾರಾದ್ರೂ ಹೇಳಿ ಕೇಳಿ ಕರೆಯಲು ಸಾಧ್ಯವಾ.? ಎಂದು ಪ್ರಶ್ನಿಸಿದ ಅವರು, ಸಂಸ್ಕಾರವಿಲ್ಲದೆ ಮಾತನಾಜುತ್ತಿದ್ದಾರೆ, ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡಿದರೆ ನಮ್ಮನ್ನು ದೆಹಲಿಗೆ ವರಿಷ್ಠರು ಕರೆಯುತ್ತಾರೆ ಎಂಬ ಆಶಾವಾದ ಅವರದ್ದಾಗಿದೆ ಎಂದು ಟೀಕಿಸಿದರು.
ರೈತರ ಅಭಿವೃದ್ಧಿಗೆ ಕ್ರಮ
196 ತಾಲ್ಲೂಕು ಬರ ಅಂತ ಘೋಷಣೆ ಮಾಡಲಾಗಿದೆ. 34 ತಾಲ್ಲೂಕುಗಳಲ್ಲಿ ಗೈಡ್ ಲೈನ್ಸ್ ಬರುತ್ತಿಲ್ಲ, ಅದನ್ನೂ ಗೈಡ್ ಲೈನ್ಸ್ ಒಳಗೆ ತಂದು ಬರ ಅಂತ ಘೋಷಣೆ ಮಾಡೋ ಪ್ರಯತ್ನ ಮಾಡ್ತಿದ್ದೇವೆ. ಪಾರ್ಲಿಮೆಂಟರಿ ಬೋರ್ಡ್‌ಗೆ ತಂದು ನಿರ್ಧಾರ ಮಾಡ್ತೀವಿ. ರೈತರಿಗೆ ಐದು ಲಕ್ಷ ಬಡ್ಡಿ ರಹಿತ ಸಾಲ ಕೊಡುತ್ತಿದ್ದೇವೆ, ಹಾಲು ದರ ಏರಿಸಿ ರೈತರಿಗೆ ಕೊಡಲಾಗುತ್ತಿದೆ, ಇದನ್ನೆಲ್ಲಾ ಸಿಎಂ ಸಿದ್ದರಾಮಯ್ಯ ತಾನೆ ಮಾಡಿದ್ದು ಎಂದರು.
ಕೇಂದ್ರದ ಬಳಿ ಬಿಜೆಪಿಯವರು ಪರಿಹಾರ ಕೇಳಲಿ
ರಾಜ್ಯದಲ್ಲಿ 25 ಸಂಸದರಿದ್ದಾರೆ ಅವರು ಪಿಎಂ ಮೋದಿ ಬಳಿ ಹೋಗಿ ಪರಿಹಾರಕ್ಕಾಗಿ ಒತ್ತಾಯ ಮಾಡಲಿ, ಇವರು ಒಬ್ಬರೂ ಕೂಡ ಬರದ ಬಗ್ಗೆ ಮಾತನಾಡುತ್ತಿಲ್ಲ ಎಂದು ಆರೋಪಿಸಿದ ಅವರು, ಪ್ರಧಾನಿ ಮೋದಿ ಬಳಿಯಾದ್ರೂ ಹೋಗಿ ಮಾತಾಡಲಿ ಎಂದು ಸವಾಲು ಹಾಕಿದರು.