ಬೆಂಗಳೂರು: ಸಿನಿಮಾ ಅಷ್ಟೇ ಅಲ್ಲದೇ, ರಾಜಕೀಯವಾಗಿ ಸಾಕಷ್ಟು ಸದ್ದು ಮಾಡ್ತಿರುವ ನಟ ಪ್ರಕಾಶ್ ರೈಗೆ ಜೀವ ಬೆದರಿಕೆ ಹಾಕಿದ್ದು, ಈ ವಿರುದ್ಧ ನಟ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ವಿಕ್ರಮ್ ಟಿವಿ ಎಂಬ ಯುಟ್ಯೂಬ್ ಚಾನೆಲ್ ವಿರುದ್ಧ
ಬೆಂಗಳೂರಿನ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಟ ಪ್ರಕಾಶ್ ರೈ, ಈ ಚಾನೆಲ್ನಲ್ಲಿ ಪ್ರಸಾರವಾದ ಎರಡು ವಿಡಿಯೋಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಪ್ರಕಾಶ್ ರಾಜ್ನಂಥವರನ್ನು ಮುಗಿಸಬೇಕಾ? ಹಿಂದೂಗಳು ಮಾಡಬೇಕಾಗಿರೋದು ಏನು? ಸನಾತನ ಧರ್ಮ ಹಿಂದೂಗಳೇ ಮಲಗೇ ಇರ್ತಿರಿ ಅಲ್ಲವಾ? ನಿಮ್ಮ ರಕ್ತ ಕುದಿಯಲ್ಲವಾ” ಎಂದು ಕಂಟೆಂಟ್ ಒಳಗೊಂಡ ಚಾನಲ್ ವಿರುದ್ಧ ಸಿಟ್ಟಿಗೆದ್ದ ನಟ, ಜೀವ ಬೆದರಿಕೆ ಹಾಕುವ ಸಂದೇಶಗಳ ರೀತಿ ವಿಡಿಯೋದಲ್ಲಿ ಪ್ರಚೋದಕಾರಿ ಮಾತುಗಳನ್ನಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜೀವಕ್ಕೆ ಬೆದರಿಕೆ ಹಾಕಿರುವ ಆರೋಪ ಹಿನ್ನೆಲೆ ವಿಕ್ರಮ್ ಟಿವಿ ಯೂಟ್ಯೂಬ್ ಚಾನಲ್ ವಿರುದ್ಧ ಐಪಿಸಿ ಸೆಕ್ಷನ್ 506, 504, 505(2) ಅಡಿ ಪ್ರಕರಣ ದಾಖಲಾಗಿದ್ದು, ಯೂಟ್ಯೂಬ್ ವಾಹಿನಿ ಮುಖ್ಯಸ್ಥ ಮತ್ತು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪ್ರಕಾಶ್ ರೈ ದೂರಿನಲ್ಲೇನಿದೆ..?
“ವಿಕ್ರಮ್ ಟಿವಿ ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಎರಡು ವಿಡಿಯೋ ನೋಡಿದೆ. ಸ್ಟಾಲಿನ್ ಪ್ರಕಾಶ್ ರಾಜ್ನಂಥವರನ್ನು ಮುಗಿಸಬೇಕಾ..? ಹಿಂದೂಗಳು ಮಾಡಬೇಕಾಗಿರೋದು ಏನು..? ಸನಾತನ ಧರ್ಮ/ ಹಿಂದೂಗಳೇ ಮಲಗೇ ಇರ್ತಿರಾ..? ನಿಮ್ಮ ರಕ್ತ ಕುದಿಯೋದಿಲ್ಲವಾ? ಎಂದು ವಿಡಿಯೋದಲ್ಲಿ ಪ್ರಚೋದಕಾರಿ ಮಾತುಗಳನ್ನಾಡಲಾಗಿದೆ. ಈ ವಿಡಿಯೋಗಳನ್ನ ಸಾವಿರಾರು ಮಂದಿ ನೋಡಿದ್ದಾರೆ. ವಿಡಿಯೋದಲ್ಲಿರುವ ಅಂಶಗಳು ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಹಾಕುವಂತಹವು. ವಿಡಿಯೋ ಮಾಡಿರುವ ವಿಕ್ರಮ್ ಟಿವಿ ಮುಖ್ಯಸ್ಥರು ಮತ್ತು ಇತರರ ವಿರುದ್ಧ ಕ್ರಮ ಕೈಗೊಳ್ಳಿ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.