ಬೆಂಗಳೂರು: ರಾಜ್ಯ ವಿಧಾನಸಭೆ ಟಿಕೆಟ್ ಕೊಡಿಸುವುದಾಗಿ ಕೋಟಿ, ಕೋಟಿ ರೂಪಾಯಿ ವಂಚಿಸಿದ ಪ್ರಕರಣ ದಿನಕ್ಕೊಂದು ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಸಿನಿಮೀಯ ಸ್ಟೈಲ್ ನಲ್ಲಿ ಅರೆಸ್ಟ್ ಮಾಡಿ ಕರೆತಂದ ಸ್ವಾಮೀಜಿ, ಹಣ ಇರೋ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಸೆಪ್ಟಂಬರ್ 29 ರ ವರೆಗೆ ಹಾಲಶ್ರೀ ಸ್ವಾಮೀಜಿ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು, ಇಂದು ಕೋರ್ಟ್ ನಲ್ಲಿ ಹಾಜರು ಪಡಿಸಿದ ಬೆನ್ನಲ್ಲೇ ತನಿಖೆಗೆ ಶುರುವಿಟ್ಟಿದ್ದಾರೆ. ಈ ವೇಳೆ ಗೋವಿಂದ ಬಾಬು ಪೂಜಾರಿಗೆ ನಾನು ಈಗಾಗಲೇ 50 ಲಕ್ಷ ಕೊಟ್ಟಿದ್ದು, ಉಳಿದ ಹಣವನ್ನೂ ವಾಪಸ್ ಮಾಡ್ತೀನಿ.ಗೋವಿಂದಬಾಬುರನ್ನು ಪರಿಚಯ ಮಾಡಿಸಿದರು. ಅವರು ನನಗೆ ಹಣ ಕೊಟ್ಟಿದ್ದಾರೆ. ಟಿಕೆಟ್ ಕೊಡಿಸ್ತೀನಿ ಅಂತ ನಾನು ಹಣ ಪಡೆದಿಲ್ಲ. ನನಗೆ ಕೊಟ್ಟಿರೋ ಹಣ ವಾಪಸ್ ಕೊಟ್ಟು ಬಿಡ್ತೀನಿ ಎಂದು ವಿಚಾರಣೆ ವೇಳೆ ಹೈಡ್ರಾಮ ಕ್ರಿಯೇಟ್ ಮಾಡಿದ್ದರಂತೆ.

ಬಳಿಕ ಇಷ್ಟು ದಿನ ಚೈತ್ರಾ ಕುಂದಾಪುರ, ಗಗನ್ ಸೇರಿದಂತೆ ಅನೇಕ ಆರೋಪಿಗಳಿಂದ ಪಡೆದ ಮಾಹಿತಿಯನ್ನ ಕ್ರಾಸ್ ಪ್ರಶ್ನೆ ಹಾಕಿ, ತಪ್ಪಿಸಿಕೊಂಡು ಹೋಗಿದ್ಯಾಕೆ ಎಂಬ ಪ್ರಶ್ನೆಗೆ ಅಭಿನವ ಶ್ರೀಗಳು ತತ್ತರಿಸಿ ಹೋಗಿದ್ದರಂತೆ. ಕೊನೆಗೆ ಅಧಿಕಾರಿಗಳ ಪ್ರಶ್ನೆಗೆ ಕಂಗಾಲಾದ ಹಾಲಶ್ರೀ, ಹಣದ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಸಿಸಿಬಿ ಪೊಲೀಸರು ನಡೆಸಿದ ತನಿಖೆಯಲ್ಲಿ ಹಾಲಶ್ರೀ ಹಣ ಪಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಮಠಕ್ಕೆ ತೆರಳಿ ಪರಿಶೀಲನೆ ನಡೆಸಿದ ವೇಳೆ ಮಠದಲ್ಲಿ ಕಂತೆ, ಕಂತೆ ಹಣ ತುಂಬಿರುವ ನೋಟಿನ ಬ್ಯಾಗ್ ಪತ್ತೆಯಾಗಿದೆ. ಮಠದ ಪಲ್ಲಕ್ಕಿ ಕೆಳಗೆ 500 ರೂಪಾಯಿ ಮುಖಬೆಲೆಯ 50 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದ್ದು, ಅಧಿಕಾರಿಗಳು ಶಾಕ್ ಆಗಿದ್ದಾರೆ. ಈ ಭಾರೀ ಮೊತ್ತದ ಹಣ ಬಿಜೆಪಿ ಟಿಕೆಟ್‌ಗಾಗಿ ಪಡೆದ ಹಣ ಎಂದು ತಿಳಿದು ಬಂದಿದ್ದು, ಸೀಜ್ ಮಾಡಲಾಗಿದೆ. ಜೊತೆಗೆ ಈ ಪ್ರಕರಣದಲ್ಲಿ ಇನ್ನೂ ಯಾರೆಲ್ಲಾ ಇದ್ದಾರೆ ಎಂಬ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.