IND v AUS: ರಾಜ್‌ಕೋಟ್‌ನಲ್ಲಿ ಕೊಹ್ಲಿ ಪ್ರಾಬಲ್ಯ: ಮೊದಲ ODI ಶತಕದ ನಿರೀಕ್ಷೆಯಲ್ಲಿ ಚೇಸ್ ಮಾಸ್ಟರ್

ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧದ 3ನೇ ಏಕದಿನ ಪಂದ್ಯಕ್ಕೆ ಭಾರತ ಸಜ್ಜಾಗಿದ್ದು, ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಭಾರತ, ಇಂದು ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುವ ಈ ಪಂದ್ಯದಲ್ಲಿ ಗೆದ್ದು ಸರಣಿ ಕ್ಲೀನ್ ಮಾಡುವ ಜೊತೆಗೆ ಏಕದಿನ ವಿಶ್ವಕಪ್‌ಗೆ ಗೆಲುವಿನ ಆತ್ಮವಿಶ್ವಾಸದಿಂದ ಎಂಟ್ರಿಕೊಡುವ ಲೆಕ್ಕಾಚಾರದಲ್ಲಿದೆ.

ಈ ನಡುವೆ ಮೊದಲೆರಡು ಪಂದ್ಯಗಳಿಂದ ವಿಶ್ರಾಂತಿ ಪಡೆದಿದ್ದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಂದಿನ ಪಂದ್ಯಕ್ಕಾಗಿ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಹೀಗಾಗಿ ರಾಜ್‌ಕೋಟ್‌ ಮೈದಾನದಲ್ಲಿ ಅದ್ಭುತ ದಾಖಲೆ ಹೊಂದಿರುವ ಕಿಂಗ್ ಕೊಹ್ಲಿ, ಆಸೀಸ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಮ್ಮ ಪ್ರಾಬಲ್ಯ ಮುಂದುವರಿಸುವ ನಿರೀಕ್ಷೆ ಹೊಂದಿದ್ದಾರೆ. ಅಲ್ಲದೇ ಈ ಪಂದ್ಯದ ಮೂಲಕ ಬ್ಯಾಟಿಂಗ್ ಲಯ ಕಂಡುಕೊಂಡು ವಿಶ್ವಕಪ್‌ನಲ್ಲಿ ಮಿಂಚುವುದು ಚೇಸ್ ಮಾಸ್ಟರ್ ಕೊಹ್ಲಿ ಲೆಕ್ಕಾಚಾರವಾಗಿದೆ.

ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ವಿರಾಟ್ ಕೊಹ್ಲಿ ಮೂರು ಫಾರ್ಮ್ಯಾಟ್ ಗಳಿಂದ ಈವರೆಗೂ ಒಟ್ಟು 7 ಪಂದ್ಯಗಳನ್ನ ಆಡಿದ್ದು, 70.28ರ ಸರಾಸರಿ ಹಾಗೂ 71.92ರ ಸ್ಟ್ರೈಕ್ ರೇಟ್ ನಲ್ಲಿ 492 ರನ್‌ಗಳಿಸಿದ್ದಾರೆ. ಈ ಮೈದಾನದಲ್ಲಿ ಕೊಹ್ಲಿ ಏಕೈಕ ಶತಕ ಬಾರಿಸಿದ್ದು, 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದರು. ಆದರೆ ಈ ಮೈದಾನದಲ್ಲಿ ಆಡಿರುವ ಏಕದಿನ ಪಂದ್ಯಗಳಲ್ಲಿ ಶತಕ ಗಳಿಸಲು ಕೊಹ್ಲಿ ಅವರಿಗೆ ಸಾಧ್ಯವಾಗಿಲ್ಲ.

ಈ ಮೈದಾನದಲ್ಲಿ ಆಡಿರುವ ಏಕದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಉತ್ತಮ ರೆಕಾರ್ಡ್ ಹೊಂದಿದ್ದಾರೆ. ಈವರೆಗೂ ಆಡಿರುವ 3 ಏಕದಿನ ಪಂದ್ಯಗಳಲ್ಲಿ 56.66ರ ಸರಾಸರಿಯಲ್ಲಿ 170 ರನ್‌ಗಳಿಸಿದ್ದು, ಇದರಲ್ಲಿ ಎರಡು ಅರ್ಧಶತಕ ಒಳಗೊಂಡಿದೆ. ಈ ಮೈದಾನದಲ್ಲಿ ಕೊಹ್ಲಿ ಅವರ ಗರಿಷ್ಠ ಸ್ಕೋರ್ 78 ರನ್‌ಗಳಾಗಿದ್ದು, ಈ ಹಿಂದೆ 2020ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ 78 ರನ್‌ಗಳಿಸಿದ್ದರು. ಹೀಗಾಗಿ ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ತಮ್ಮ ಮೊದಲ ಏಕದಿನ ಶತಕ ದಾಖಲಿಸುವ ನಿರೀಕ್ಷೆ ಹೊಂದಿರುವ ವಿರಾಟ್, ಇದಕ್ಕಾಗಿ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ.

More News

You cannot copy content of this page